ಚೆನ್ನೈ: ಕಳೆದ ವಾರ ಡಿಎಂಕೆ ಸಂಸದೆ ಕನಿಮೊಳಿ ಅವರ ಪ್ರಯಾಣದ ವೇಳೆ ಟಿಕೆಟ್ ವಿಚಾರವಾಗಿ ಉಂಟಾದ ವಿವಾದದ ನಂತರ ಬಸ್ ಚಾಲಕ ವೃತ್ತಿಗೆ ರಾಜೀನಾಮೆ ನೀಡಿದ್ದ ಮಹಿಳೆಗೆ ನಟ, ರಾಜಕಾರಣಿ ಕಮಲ್ ಹಾಸನ್ ಸೋಮವಾರ ಕಾರನ್ನು ಉಡುಗೊರೆ ನೀಡಿದ್ದಾರೆ.
‘ಕೊಯಿಮತ್ತೂರಿನ ಪ್ರಥಮ ಮಹಿಳಾ ಬಸ್ ಚಾಲಕಿ ಶರ್ಮಿಳಾ ಅವರಿಗೆ ಕಮಲ್ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಈ ಉಡುಗೊರೆ ನೀಡಲಾಗಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಶರ್ಮಿಳಾ ಅವರ ವಿಚಾರವಾಗಿ ನಡೆಯುತ್ತಿದ್ದ ಚರ್ಚೆ ನೋಡಿ ಕಳವಳವಾಗಿತ್ತು. ಅವರು ಈ ಕಾಲದ ಮಾದರಿ ಹೆಣ್ಣು. ಅವರಂಥ ಮತ್ತಷ್ಟು ಮಹಿಳೆಯರು ಮುನ್ನೆಲೆಗೆ ಬರಬೇಕು ಎಂಬುದು ನನ್ನ ಆಶಯ. ಅವರು ಈ ಕಾರನ್ನು ಬಾಡಿಗೆ ಸೇವೆಗೆ ಬಳಸಬಹುದು ಮತ್ತು ಭವಿಷ್ಯದಲ್ಲಿ ಉದ್ಯಮಿಯಾಗಬಹುದು’ ಎಂದು ಹೇಳಿದರು.
ಆಗಿದ್ದೇನು?: ಕಳೆದ ವಾರ ಕನಿಮೊಳಿ ಅವರು ಗಾಂಧಿಪುರಂನಿಂದ ಪೀಲಮೇದುಗೆ ಬಸ್‌ನಲ್ಲಿ ಪ್ರಯಾಣಿಸಿದ್ದರು. ಆ ಬಸ್‌ನಲ್ಲಿ ಶರ್ಮಿಳಾ ಚಾಲಕಿಯಾಗಿದ್ದರು.
‘ಕನಿಮೊಳಿ ಅವರಿಗೆ ಮಹಿಳಾ ಕಂಡಕ್ಟರ್ ಅಗೌರವ ತೋರಿದರು ಮತ್ತು ಪ್ರಚಾರಕ್ಕಾಗಿ ಬಸ್‌ನಲ್ಲಿ ಪ್ರಯಾಣಿಸುವಂತೆ ಖ್ಯಾತನಾಮರನ್ನು ಆಹ್ವಾನಿಸಲಾಗಿದೆ ಎಂದು ಆಡಳಿತ ಮಂಡಳಿ ಆರೋಪ ಮಾಡಿದೆ. ಹೀಗಾಗಿ ಕನಸಿನ ವೃತ್ತಿ ತೊರೆಯುತ್ತಿದ್ದೇನೆ’ ಎಂದು ಶರ್ಮಿಳಾ ಘೋಷಿಸಿದ್ದರು.
‘ಕನಿಮೊಳಿ ಅವರ ಭೇಟಿಯ ಬಗ್ಗೆ ಆಡಳಿತ ಮಂಡಳಿಗೆ ಮೊದಲೇ ಮಾಹಿತಿ ನೀಡಿದ್ದೆ. ಆದರೆ ಸಂಸದೆಗೆ ‘ಅಗೌರವ’ ತೋರಿದ್ದನ್ನು ಸಹಿಕೊಳ್ಳಲಾಗಲಿಲ್ಲ’ ಎಂದೂ ಶರ್ಮಿಳಾ ಹೇಳಿದ್ದರು.
ಆದರೆ ಕನಿಮೊಳಿ ಭೇಟಿ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂಬ ಹೇಳಿಕೆಯನ್ನು ಸಾರಿಗೆ ಸಂಸ್ಥೆ ಅಲ್ಲಗಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.