ಬೆಂಗಳೂರು: ನಟ ಪ್ರಭಾಸ್ ಅವರು ಅಯೋಧ್ಯೆಯಲ್ಲಿನ ರಾಮ ಮಂದಿರಕ್ಕೆ ₹50 ಕೋಟಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು.
ಆದರೆ, ಇದು ಸುಳ್ಳು ಸುದ್ದಿ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಆಂಧ್ರಪ್ರದೇಶ ಶಾಸಕ ಚಿರ್ಲಾ ಜಗ್ಗಿರೆಡ್ಡಿ ಅವರು ಪ್ರಭಾಸ್ ಅವರನ್ನು ಹೊಗಳುವ ಭರದಲ್ಲಿ, ‘ಪ್ರಭಾಸ್ ರಾಮ ಮಂದಿರಕ್ಕೆ ₹ 50 ಕೋಟಿ ಕೊಡುತ್ತಿದ್ದಾರೆ. ರಾಮ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಂದು ಭೋಜನ ಆಯೋಜನೆಯ ಹೊಣೆ ತೆಗೆದುಕೊಂಡಿದ್ದಾರೆ’ ಎಂದು ಹೇಳಿರುವ ವಿಡಿಯೊ ಹರಿದಾಡಿತ್ತು. ಇದನ್ನೇ ಪ್ರಭಾಸ್ ಅಭಿಮಾನಿಗಳನೇಕರು ಹಂಚಿಕೊಂಡಿದ್ದರು.
‘ಇದೊಂದು ಸುಳ್ಳು ಸುದ್ದಿ. ಆ ರೀತಿ ಇಲ್ಲ ಎಂಬುದಾಗಿ ಪ್ರಭಾಸ್ ಅವರ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ’ ಎಂದು ಇಂಡಿಯಾ ಟುಡೇ ವೆಬ್‌ಸೈಟ್ ಮಾಹಿತಿ ನೀಡಿದೆ.
ಇನ್ನೊಂದೆಡೆ ರಜನಿಕಾಂತ್, ಚಿರಂಜೀವಿ ಸೇರಿ ಹಲವು ನಟ–ನಟಿಯರಿಗೆ ರಾಮ ಮಂದಿರ ಕಾರ್ಯಕ್ರಮದ ಆಮಂತ್ರಣ ಹೋಗಿದೆ. ಆದರೆ, ಪ್ರಭಾಸ್ ಅವರಿಗೆ ಆಮಂತ್ರಣ ಹೋಗಿದೆಯೋ? ಇಲ್ಲವೋ? ಎಂಬುದನ್ನು ಅವರ ಕಡೆಯವರು ಸ್ಪಷ್ಟಪಡಿಸಿಲ್ಲ ಎಂದೂ ಹೇಳಿದೆ.
ಜ.22 ರಂದು ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ, ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.
ಪ್ರಭಾಸ್ ಅಭಿನಯದ ಸಲಾರ್ ಪಾರ್ಟ್– 1 ಜ.20 ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ತೆರೆಕಾಣಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.