ಬೆಂಗಳೂರು: ಮಹಾರಾಷ್ಟ್ರದ ಅನುಶಕ್ತಿನಗರ ವಿಧಾನಸಭಾ ಕ್ಷೇತ್ರದಿಂದ ಎನ್‌ಸಿಪಿ (ಶರದ್ಚಂದ್ರ) ಯಿಂದ ಸ್ಪರ್ಧೆ ಮಾಡಿದ್ದ ನಟಿ ಸ್ವರಾ ಭಾಸ್ಕರ್ ಅವರ ಪತಿ ಫಹದ್ ಅಹ್ಮದ್ ಅವರು ಸೋಲುಂಡಿದ್ದಾರೆ.
ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಸನಾ ಮಲಿಕ್ ವಿರುದ್ಧ 3,378 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಫಹದ್ 45,963 ಮತ ಗಳಿಸಿದರೆ, ಸನಾ 49,341 ಮತಗಳನ್ನು ಪಡೆದಿದ್ದಾರೆ.
ಚುನಾವಣಾ ಫಲಿತಾಂಶ ಬೆನ್ನಲ್ಲೇ ಅಪಸ್ವರ ಎತ್ತಿರುವ ಫಹದ್, ಫಲಿತಾಂಶವನ್ನು ಬಿಜೆಪಿ ತಿರುಚಿದೆ ಎಂದು ಆರೋಪಿಸಿದ್ದಾರೆ. 17ನೇ ಸುತ್ತಿನವರೆಗೂ ನಾನು ಮುನ್ನಡೆಯಲ್ಲಿದ್ದೆ. ಶೇ 99ರಷ್ಟು ಬ್ಯಾಟರಿ ತೋರಿಸಿದ್ದ ಇವಿಎಂನಲ್ಲಿ ಸನಾ ಮಲಿಕ್ ಅವರು ಮುನ್ನಡೆ ಪಡೆದಿದ್ದರು, ಅದಕ್ಕಿಂತ ಕಡಿಮೆ ಪ್ರಮಾಣದ ಬ್ಯಾಟರಿ ತೋರಿಸುತ್ತಿದ್ದ ಇವಿಎಂಗಳಲ್ಲಿ ನನಗೆ ಹೆಚ್ಚಿನ ಮತ ಬಿದ್ದಿತ್ತು’ ಎಂದು ಆರೋಪಿಸಿದ್ದಾರೆ.
ಶೇ 99 ಬ್ಯಾಟರಿ ಚಾರ್ಚ್ ಆಗಿದ್ದ ಇವಿಎಂಗಳಲ್ಲಿ ಎನ್‌ಸಿಪಿ ಅಜಿತ್ ಪವಾರ್ ಅಭ್ಯರ್ಥಿ ಹೆಚ್ಚಿನ ಮತ ಪಡೆದು ಮುನ್ನಡೆ ಗಳಿಸಿದರು ಎಂದು ಹೇಳಿದ್ದಾರೆ. ಈ ಬಗ್ಗೆ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಸ್ವರಾ ಭಾಸ್ಕರ್ ಅವರೂ ಕೂಡ ಇದೇ ಆರೋಪ ಮಾಡಿದ್ದು, ಮರು ಮತ ಎಣಿಕೆಗೆ ಆಗ್ರಹಿಸಿದ್ದಾರೆ. ಒಂದು ವೇಳೆ ಎಲ್ಲವೂ ಕ್ರಮಬದ್ಧವಾಗಿದ್ದರೆ ಜನಾದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.