ಚೆನ್ನೈ: ಫೆಬ್ರುವರಿಯಲ್ಲಿ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ ನಂತರ ತಮಿಳು ನಟ ವಿಜಯ್ ಮೊದಲ ಬಾರಿಗೆ ಶುಕ್ರವಾರ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಮಾದಕ ವಸ್ತುಗಳಿಂದ ದೂರ ಉಳಿಯುವಂತೆ ಯುವ ಮತದಾರರಿಂದ ಶಪಥ ಮಾಡಿಸಿದ ವಿಜಯ್, ಡಿಎಂಕೆ ಸರ್ಕಾರವು ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
ಜಿಲ್ಲಾ ಮಟ್ಟದಲ್ಲಿ 10 ಮತ್ತು 12ನೇ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ರಾಜ್ಯದಲ್ಲಿ ರಾಜಕಾರಣ ಅಷ್ಟೇ ಅಲ್ಲದೇ ಪ್ರತಿ ಕ್ಷೇತ್ರದಲ್ಲೂ ಉತ್ತಮ ನಾಯಕರ ಅಗತ್ಯವಿದೆ ಎಂದು ಹೇಳುವ ಮೂಲಕ ಚಾಲ್ತಿಯಲ್ಲಿರುವ ರಾಜಕೀಯ ಪಕ್ಷಗಳನ್ನು ಟೀಕಿಸಿದರು.
‘ಎಂದಿಗೂ ಕೆಟ್ಟ ಕೆಲಸಗಳಲ್ಲಿ ತೊಡಗಬೇಡಿ. ನಿಮ್ಮ ಅಸ್ತಿತ್ವವನ್ನು ಎಂದೂ ಕಳೆದುಕೊಳ್ಳಬೇಡಿ. ನಾನು ಏಕೆ ಇದನ್ನು ಹೇಳುತ್ತಿದ್ದೇನೆ ಎಂದರೆ, ತಮಿಳುನಾಡಿನ ಯುವ ಜನತೆಯಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾಗಿದೆ. ಇದರ ಬಗ್ಗೆ ಮಕ್ಕಳ ತಂದೆಯಾಗಿ ಮತ್ತು ರಾಜಕೀಯ ಪಕ್ಷವೊಂದರ ನಾಯಕನಾಗಿ ನಾನು ಚಿಂತೆಗೊಳಗಾಗಿದ್ದೇನೆ’ ಎಂದು ಹೇಳಿದರು.
ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಂ’ ಪಕ್ಷ ಸ್ಥಾಪನೆ ಮಾಡಿದ ನಂತರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತತ ಎರಡನೇ ಬಾರಿ ಸನ್ಮಾನಿಸಿದರು. 2023ರಲ್ಲಿ ಅವರು, ಮತ ಚಲಾವಣೆಗಾಗಿ ಹಣ ಪಡೆಯದಿರುವಂತೆ, ಮತ ಮಾರಾಟ ಮಾಡದಂತೆ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಕರೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.