ಹೈದರಾಬಾದ್: ತೆಲಂಗಾಣ ವಿಧಾನಸಭೆಗೆ ಕೆಲ ದಿನಗಳು ಬಾಕಿ ಇರುವಾಗ ಮಾಜಿ ಸಂಸದೆ ಮತ್ತು ಹಿರಿಯ ನಟಿ ವಿಜಯಶಾಂತಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಅವರು ಶುಕ್ರವಾರ ಕಾಂಗ್ರೆಸ್‌ಗೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಇತ್ತೀಚಿನ ದಿನಗಳಲ್ಲಿ ಅವರು ಬಿಜೆಪಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. 2009ರಲ್ಲಿ ರಾಜಕೀಯ ಜೀವನ ಆರಂಭಿಸಿದ್ದ ಅವರು 2020ರಲ್ಲಿ ಬಿಜೆಪಿ ಸೇರಿದ್ದರು.
1998ರಲ್ಲಿ ತಮ್ಮ ರಾಜಕೀಯ ವೃತ್ತಿಜೀವನ ಆರಂಭಿಸಿದ ವಿಜಯಶಾಂತಿ, ಬಿಜೆಪಿಯ ಹಿರಿಯ ನಾಯಕ ಎಂ.ವೆಂಕಯ್ಯ ನಾಯ್ಡು ಹಾಗೂ ಚ.ವಿದ್ಯಾಸಾಗರ ರಾವ್ ಅವರೊಂದಿಗೆ ಪಕ್ಷದಲ್ಲಿ ಕೆಲಸ ಮಾಡಿದ್ದರು. ಇಷ್ಟು ಮಾತ್ರವಲ್ಲದೇ ಎಲ್.ಕೆ.ಅಡ್ವಾಣಿ ಅವರಿಗೂ ಆಪ್ತರಾಗಿದ್ದರು.
ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಧುಮುಕಿದ ವಿಜಯಶಾಂತಿ, ತೆಲಂಗಾಣ ತೈಲಿ ಪಾರ್ಟಿ ಆರಂಭಿಸಿದರು. ನಂತರ ತೆಲಂಗಾಣ ರಾಷ್ಟ್ರ ಸಮಿತಿ ಸೇರಿದರು. 2009ರಲ್ಲಿ ಬಿಆರ್‌ಎಸ್ (ಆಗ ಟಿಆರ್‌ಎಸ್) ಪಕ್ಷದಿಂದ ಮೇದಕ್ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿದರು. ನಂತರ ಬಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರೊಂದಿಗಿನ ವೈಮನಸ್ಸಿನಿಂದಾಗಿ ಪಕ್ಷ ತೊರೆದು 2014ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದರು.
ಅದೇ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೂ ವಿಜಯಶಾಂತಿ ಪರಾಭವಗೊಂಡಿದ್ದರು. 2020ರಲ್ಲಿ ಅವರು ಮತ್ತೆ ಬಿಜೆಪಿ ಸೇರಿದ್ದರು. ರಾಜಕೀಯದಲ್ಲೂ ತಮ್ಮ ರೆಬಲ್ ಗುಣವನ್ನೇ ಮುಂದುವರಿಸಿದ ವಿಜಯಶಾಂತಿ, ತಾವು ನಂಬಿರುವ ಸಿದ್ಧಾಂತಕ್ಕೆ ವಿರೋಧ ವ್ಯಕ್ತವಾದಾಗಲೆಲ್ಲಾ ಸಿಡಿದು ಪಕ್ಷದಿಂದ ಹೊರಬಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷದ ಚುಕ್ಕಾಣಿ ಬದಲಾವಣೆ ನಂತರ ವಿಜಯಶಾಂತಿ ಅವರಿಗೆ ಯಾವುದೇ ಹುದ್ದೆಯನ್ನು ಪಕ್ಷ ನೀಡಿರಲಿಲ್ಲ. ಹೀಗಾಗಿ ಅವರು ಮುನಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆ ಸೇರಿದಂತೆ ಸುಮಾರು 170ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ವಿಜಯಶಾಂತಿ, ರೆಬಲ್ ಪಾತ್ರಗಳಲ್ಲಿ ಮಿಂಚುವ ಮೂಲಕ ‘ಲೇಡಿ ಅಮಿತಾಬ್’ ಎಂದೇ ಹೆಸರಾಗಿದ್ದವರು. ರಾಜಕೀಯ ಪ್ರವೇಶದಿಂದ ನಟನೆಯಿಂದ ದೂರ ಉಳಿದರು. ಇತ್ತೀಚೆಗೆ ನಂದಮೂರಿ ಕಲ್ಯಾಣ ರಾಮ್ ಅವರ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.