ADVERTISEMENT

ಅದಾನಿ ವಿಷಯ: ಕಾಂಗ್ರೆಸ್‌ ಇಬ್ಬಗೆ ನೀತಿ- ಕೆ.ಟಿ.ರಾಮರಾವ್‌ ಆರೋಪ

ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್‌ ಆರೋಪ * ಒಪ್ಪಂದಗಳ ರದ್ದುಗೊಳಿಸಲು ಆಗ್ರಹ

ಪಿಟಿಐ
Published 22 ನವೆಂಬರ್ 2024, 16:02 IST
Last Updated 22 ನವೆಂಬರ್ 2024, 16:02 IST
ಕೆ.ಟಿ.ರಾಮರಾವ್‌
ಕೆ.ಟಿ.ರಾಮರಾವ್‌   

ಹೈದರಾಬಾದ್‌: ಉದ್ಯಮಿ ಗೌತಮ್‌ ಅದಾನಿ ವಿಷಯದಲ್ಲಿ ಕಾಂಗ್ರೆಸ್‌ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್‌, ‘ಕಾಂಗ್ರೆಸ್‌ ಆಡಳಿತವಿರುವ ತೆಲಂಗಾಣವು ಅದಾನಿ ಗ್ರೂಪ್ ಜತೆ ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಗೊಳಿಸುತ್ತದೆಯೇ? ಈ ನಿಟ್ಟಿನಲ್ಲಿ ತೆಲಂಗಾಣ ಸರ್ಕಾರಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೂಚಿಸುವರೇ’ ಎಂದು ಪ್ರಶ್ನಿಸಿದರು.

ಬಿಆರ್‌ಎಸ್‌ ಅಡಳಿತವಿದ್ದ 10 ವರ್ಷಗಳ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ಅದಾನಿ ಅವರಿಗೆ ತೆಲಂಗಾಣ ಪ್ರವೇಶಕ್ಕೆ ಅವಕಾಶ ನೀಡಲಿರಲಿಲ್ಲ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಅದಾನಿ ಅವರಿಗೆ ಅಮೆರಿಕ ನ್ಯಾಯಾಲಯ ಬಂಧನದ ವಾರಂಟ್‌ ಹೊರಡಿಸಿದ ಬೆನ್ನಲ್ಲೇ, ಕೆನ್ಯಾ ದೇಶವು ಅದಾನಿ ಗ್ರೂಪ್‌ ಜತೆಗಿನ ಎಲ್ಲ ವ್ಯವಹಾರಿಕ ಸಂಬಂಧಗಳನ್ನು ಕಡಿತಗೊಳಿಸುವುದಾಗಿ ಪ್ರಕಟಿಸಿದೆ. ಸಾರಿಗೆ, ಇಂಧನ, ವಿದ್ಯುತ್‌ ಮತ್ತು ವಿಮಾನ ನಿಲ್ದಾಣ ನಿರ್ವಹಣಾ ಕ್ಷೇತ್ರಗಳಲ್ಲಿನ ಗುತ್ತಿಗೆಗಳನ್ನು ಕೆನ್ಯಾ ರದ್ದುಗೊಳಿಸಿದೆ. ರಾಹುಲ್ ಗಾಂಧಿ ಅವರು ಅದಾನಿ ಅವರನ್ನು ಖಳನಾಯಕ ಎಂದು ಕರೆಯುತ್ತಾರೆ. ಹಾಗಾದರೆ ಕೆನ್ಯಾ ಸರ್ಕಾರದಂತೆಯೇ, ತೆಲಂಗಾಣ ಸರ್ಕಾರವೇಕೆ ಅದಾನಿ ಜತೆಗಿನ ಒಪ್ಪಂದಗಳನ್ನು ರದ್ದುಗೊಳಿಸಬಾರದು. ನಿಮ್ಮ ಪಕ್ಷದ ಆಡಳಿತವು ರಾಜ್ಯದಲ್ಲಿ ₹ 12,400 ಕೋಟಿ ಮೊತ್ತದ ವ್ಯವಹಾರಿಕ ಒಪ್ಪಂದಗಳನ್ನು ಮಾಡಿಕೊಂಡಿದೆ. ಅವುಗಳನ್ನು ರದ್ದುಗೊಳಿಸಲು ನೀವು ಮುಖ್ಯಮಂತ್ರಿಗೆ ಸೂಚಿಸಿ’ ಎಂದು ಅವರು ಒತ್ತಾಯಿಸಿದರು. 

ADVERTISEMENT

‘ಅದಾನಿ ಜತೆಗೆ ಪ್ರಧಾನಿ ಅವರ ಸ್ನೇಹವನ್ನು ಖಂಡಿಸುವ ರಾಹುಲ್‌ ಗಾಂಧಿ ಅವರು, ರೇವಂತ್‌ ರೆಡ್ಡಿ ವಿಚಾರದಲ್ಲಿ ಏಕೆ ಮೌನವಾಗಿದ್ದಾರೆ. ಅದಾನಿ ಅವರು ದೇಶಕ್ಕೆ ಹಾನಿಕಾರಕ ಎಂದು ರಾಹುಲ್‌ ಪ್ರತಿಪಾದಿಸುತ್ತಾರೆ. ಅದು ನಿಜವಾಗಿದ್ದರೆ, ಅಂಥವರಿಂದ ತೆಲಂಗಾಣಕ್ಕೆ ಏನು ಪ್ರಯೋಜನ?’ ಎಂದು ಅವರು ಪ್ರಶ್ನಿಸಿದರು. 

‘ಬಿಆರ್‌ಎಸ್‌ ಅಧಿಕಾರಾವಧಿಯಲ್ಲಿ ಅದಾನಿ ಹಲವು ಬಾರಿ ತೆಲಂಗಾಣದಲ್ಲಿ ಹೂಡಿಕೆ ಮಾಡಲು ಬಂದಿದ್ದರು. ಆದರೆ, ಅವರಿಗೆ ಚಹಾ ನೀಡಿ, ಹಾಗೆಯೇ ಕಳುಹಿಸಿದ್ದೆವು. ಅವರೊಂದಿಗೆ ಯಾವುದೇ ರೀತಿಯ ವ್ಯವಹಾರಿಕ ಒಪ್ಪಂದವನ್ನು ನಮ್ಮ ಸರ್ಕಾರ ಮಾಡಿಕೊಳ್ಳಲಿಲ್ಲ. ಆದರೆ ಕಾಂಗ್ರೆಸ್‌ನದ್ದು ಇಬ್ಬಗೆ ನೀತಿ ಎಂಬುದು ಅದು ಮಾಡಿಕೊಂಡಿರುವ ಒಪ್ಪಂದಗಳಿಂದಲೇ ಸ್ಪಷ್ಟವಾಗುತ್ತದೆ’ ಎಂದು ಅವರು ಟೀಕಿಸಿದರು.

‘ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಒಪ್ಪಿಗೆಯಿಲ್ಲದೆ ಏನೇನೂ ನಡೆಯುವುದಿಲ್ಲ. ಸಣ್ಣ ನಗರ ಪಾಲಿಕೆಯ ಹುದ್ದೆಗಳ ಹಂಚಿಕೆಯಿಂದ ಹಿಡಿದು ಸಂಪುಟ ವಿಸ್ತರಣೆವರೆಗೂ ಅಲ್ಲಿ ಹೈಕಮಾಂಡ್‌ ಒಪ್ಪಿಗೆ ಅತ್ಯಗತ್ಯ. ಹೀಗಿರುವಾಗ ಹೈಕಮಾಂಡ್‌ ಅನುಮತಿಯಿಲ್ಲದೇ ರಾಜ್ಯ ಸರ್ಕಾರ ಅದಾನಿ ಜತೆಗೆ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ನಾವು ನಂಬಬೇಕೆ? ನಿತ್ಯ ಅದಾನಿಯನ್ನು ಟೀಕಿಸುವ ರಾಹುಲ್‌ ಗಾಂಧಿ ಅವರು ಈ ಒಪ್ಪಂದಗಳನ್ನು ಬೆಂಬಲಿಸಿದ್ದಾರೆಯೇ? ಈ ಬಗ್ಗೆ ಅವರು ಸ್ಪಷ್ಟಪಡಿಸಬೇಕು’ ಎಂದು ಕೆಟಿಆರ್‌ ಒತ್ತಾಯಿಸಿದರು.

‘ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರವು ಅದಾನಿ ಅವರಿಂದ ₹ 100 ಕೋಟಿ ದೇಣಿಗೆ ಪಡೆದಿದೆ. ಇದು ರಾಹುಲ್‌ ಅವರಿಗೆ ತಿಳಿದಿದೆಯೇ? ಅಥವಾ ಅವರ ಗಮನಕ್ಕೆ ಬರದಂತೆ ಇದನ್ನು ಸ್ವೀಕರಿಸಲಾಗಿದೆಯೇ?’ ಎಂದು ಅವರು ಪ್ರಶ್ನೆ ಮಾಡಿದರು.

‘ಅದಾನಿ ಪ್ರದೇಶ’ವನ್ನಾಗಿಸಿದ ಜಗನ್‌: ಶರ್ಮಿಳಾ ಆರೋಪ

ಹೈದರಾಬಾದ್‌: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ರಾಜ್ಯವನ್ನು ಅದಾನಿ ಅವರಿಗೆ ‘ಖಾಲಿ ಚೆಕ್‌‘ನಂತೆ ನೀಡುವ ಮೂಲಕ ಆಂಧ್ರ ಪ್ರದೇಶವನ್ನು ‘ಅದಾನಿ ಪ್ರದೇಶ’ವನ್ನಾಗಿ ಪರಿವರ್ತಿಸಿದ್ದಾರೆ ಎಂದು ಆಂಧ್ರ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಎಪಿಸಿಸಿ) ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಟೀಕಿಸಿದರು. ‘ಆಂಧ್ರದ ಜನರ ಭಾವನೆಗಳನ್ನು ₹ 1750 ಕೋಟಿ ಲಂಚಕ್ಕೆ ಅಡಮಾನ ಇಟ್ಟ ಜಗನ್‌ ಅವರಿಂದ ವೈಎಸ್‌ಆರ್‌ ಕುಟುಂಬ ಮತ್ತು ಇಡೀ ರಾಜ್ಯಕ್ಕೆ ಅಪಮಾನ ಆಗಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.