ನವದೆಹಲಿ: ಉದ್ಯಮಿ ಗೌತಮ್ ಅದಾನಿ ಅವರು ಯುಪಿಎ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರ ನೆರವಿನಿಂದ ರಾಹುಲ್ ಗಾಂಧಿ ಜತೆ ಮಾತುಕತೆಗೆ ಪ್ರಯತ್ನಿಸಿದ್ದರು ಎಂಬ ವಿಚಾರವನ್ನು ಹೊಸ ಪುಸ್ತಕವೊಂದು ಬಹಿರಂಗಪಡಿಸಿದೆ.
ಆದರೆ ಅದಾನಿ ಭೇಟಿಯಾಗುವಂತೆ ರಾಹುಲ್ ಅವರ ಮನವೊಲಿಸಲು ಅಹ್ಮದ್ ಪಟೇಲ್ ಮತ್ತು ಕಮಲ್‌ನಾಥ್ ಅವರಂತಹ ನಾಯಕರಿಗೂ ಸಾಧ್ಯವಾಗಲಿಲ್ಲ ಎಂದು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರ, ‘2024: ದಿ ಎಲೆಕ್ಷನ್ ದೆಟ್ ಸರ್‌ಪ್ರೈಸ್ಡ್ ಇಂಡಿಯಾ’ ಪುಸ್ತಕ ತಿಳಿಸಿದೆ.
‘ಎಡಪಂಥೀಯ ಸಲಹೆಗಾರರ ಗುಂಪೊಂದು ರಾಹುಲ್ ಅವರನ್ನು ಸುತ್ತುವರಿದಿದ್ದು, ಅವರು ಕಾಂಗ್ರೆಸ್ ನಾಯಕನ ತಲೆಯಲ್ಲಿ ತಮ್ಮ ಬಗ್ಗೆ ಕೆಟ್ಟ ಅಭಿಪ್ರಾಯಗಳನ್ನು ತುಂಬಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ರಾಜಕೀಯ ಹೋರಾಟದಲ್ಲಿ ರಾಹುಲ್ ಅವರು ತಮ್ಮನ್ನು ‘ದಾಳ’ವಾಗಿ ಬಳಸುತ್ತಿದ್ದಾರೆ ಎಂಬುದು ಅದಾನಿ ಅವರಿಗೆ ಮನವರಿಕೆಯಾಯಿತು’ ಎಂದೂ ಪುಸ್ತಕದಲ್ಲಿ ಹೇಳಲಾಗಿದೆ.
‘ಯುಪಿಎ ಆಡಳಿತದ ಅವಧಿಯಲ್ಲಿ ಅದಾನಿ, ಮೊದಲು ರಾಬರ್ಟ್ ವಾದ್ರಾ ಮೂಲಕ ರಾಹುಲ್ ಭೇಟಿಗೆ ಪ್ರಯತ್ನಿಸಿದ್ದರು. ಅದಕ್ಕಾಗಿ ವಾದ್ರಾ ಅವರನ್ನು ಗುಜರಾತ್‌ನಲ್ಲಿರುವ ತಮ್ಮ ಮುಂದ್ರಾ ಬಂದರಿಗೆ ಕರೆಸಿಕೊಂಡಿದ್ದರು’ ಎಂದು ಹೇಳಿದೆ.
‘ಅದರ ಬೆನ್ನಲ್ಲೇ, ಇಬ್ಬರನ್ನೂ ದೆಹಲಿಯಲ್ಲಿ ಭೇಟಿ ಮಾಡಿಸುವ ಪ್ರಯತ್ನಗಳನ್ನು ಮಾಡಲಾಯಿತು. ಮೊದಲು ಅಹ್ಮದ್ ಪಟೇಲ್ ಮತ್ತು ನಂತರ ಕಮಲ್‌ನಾಥ್ ಮೂಲಕ ಈ ಪ್ರಯತ್ನಗಳು ನಡೆದವು. ಆದರೆ ಅದಾನಿ ಅವರನ್ನು ಭೇಟಿಯಾಗುವಂತೆ ರಾಹುಲ್ ಅವರ ಮನವೊಲಿಸಲು ಇಬ್ಬರಿಗೂ ಸಾಧ್ಯವಾಗಲಿಲ್ಲ’ ಎಂದು ತಿಳಿಸಿದೆ.
ಅದಾನಿ ಅವರೊಂದಿಗೆ ವೈಯಕ್ತಿವಾಗಿ ಉತ್ತಮ ಬಾಂಧವ್ಯ ಹೊಂದಿದ್ದ ಇನ್ನೊಬ್ಬ ನಾಯಕ ಶರದ್ ಪವಾರ್ ನೆರವಿನಿಂದ ‘ಸಂಧಾನ’ ಮಾತುಕತೆಗೆ ಪ್ರಯತ್ನ ನಡೆಯಿತು. ಆದರೆ ಎಚ್ಚರಿಕೆಯ ಹೆಜ್ಜೆಯಿಟ್ಟ ಪವಾರ್, ‘ಸಂಧಾನಕಾರ’ನ ಪಾತ್ರ ವಹಿಸುವುದರಿಂದ ದೂರ ಉಳಿಯಲು ನಿರ್ಧರಿಸಿದರು ಎಂದು ಹೇಳಿದೆ.
‘ಅದಾನಿ–ರಾಹುಲ್ ಜಟಾಪಟಿ 2014ಕ್ಕಿಂತ ಹಿಂದೆಯೇ ಶುರುವಾಗಿದೆ. ಮೋದಿ ಮತ್ತು ಅದಾನಿ ಅವರು ಪರಸ್ಪರ ಹೇಗೆ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ ನಾಯಕರೊಬ್ಬರು ರಾಹುಲ್ ಅವರಿಗೆ ಸಮಗ್ರವಾಗಿ ವಿವರಿಸಿದ್ದರು. ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅದಾನಿ ಸಮೂಹವು ಯಾವ ರೀತಿ ಬೆಳವಣಿಗೆ ಸಾಧಿಸಿತು ಎಂಬ ಬಗ್ಗೆಯೂ ಹೇಳಿದ್ದರು’ ಎಂಬುದು ಪುಸ್ತಕದಲ್ಲಿದೆ.
’ ತಮ್ಮನ್ನು ಟೀಕಿಸುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಿರುದ್ಧ ಅದಾನಿಗೆ ಸಿಟ್ಟು ಇದೆ ಎಂಬ ವಿವರವೂ ಪುಸ್ತಕದಲ್ಲಿದೆ. ‘ರಾಹುಲ್ ಅವರು ಎಲ್ಲ ಸಂದರ್ಭಗಳಲ್ಲೂ ನಮ್ಮನ್ನು ಟೀಕಿಸುತ್ತಾರೆ. ಆದರೆ ನಿಜವಾಗಿಯೂ ನಮ್ಮ ವಿರುದ್ಧದ ಅಜೆಂಡಾವನ್ನು ರೂಪಿಸುತ್ತಿರುವವರು ಜೈರಾಮ್ ರಮೇಶ್ ಆಗಿದ್ದಾರೆ’ ಎಂದು ಅದಾನಿ ಅವರು ಉದ್ಯಮ ವಲಯದ ಸ್ನೇಹಿತರೊಬ್ಬರಿಗೆ ಹೇಳಿದ್ದಾಗಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.