ADVERTISEMENT

ಹೆಚ್ಚುವರಿ ಪಟ್ಟಿಯಲ್ಲಿರುವವರ ನೇಮಕ ರಾಜ್ಯ ಸರ್ಕಾರದ ವಿವೇಚನೆ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 25 ಮೇ 2023, 4:55 IST
Last Updated 25 ಮೇ 2023, 4:55 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ಹೆಚ್ಚುವರಿ ಪಟ್ಟಿಯಲ್ಲಿ ಅಭ್ಯರ್ಥಿಯೊಬ್ಬರ ಹೆಸರು ಇದ್ದ ಮಾತ್ರಕ್ಕೆ ಅದು ನೇಮಕಾತಿಗೆ ಸಂಬಂಧಿಸಿದ ಬಾಧ್ಯತೆ ಅಥವಾ ಹಕ್ಕನ್ನು ಸೃಷ್ಟಿಸುವುದಿಲ್ಲ. ಇಂತಹ ಪಟ್ಟಿಯಲ್ಲಿರುವವರನ್ನು ಖಾಲಿ ಹುದ್ದೆಗಳಿಗೆ ನೇಮಿಸುವುದು ರಾಜ್ಯ ಸರ್ಕಾರದ ವಿವೇಚನೆಗೆ ಒಳಪಟ್ಟಿರುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ರಾಜ್ಯ ಸರ್ಕಾರವು ಈ ವಿಚಾರದಲ್ಲಿ ನಿರಂಕುಶವಾಗಿ ವರ್ತಿಸುವ ಹಾಗಿಲ್ಲ. ಅದು ಕೈಗೊಳ್ಳುವ ತೀರ್ಮಾನವನ್ನು ನ್ಯಾಯಾಂಗದ ಪರಿಶೀಲನೆಗೆ ಒಳಪಡಿಸಲಾಗುತ್ತದೆ’ ಎಂದೂ ತಿಳಿಸಿದೆ.

ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರಿದ್ದ ದ್ವಿಸದಸ್ಯ ನ್ಯಾಯಪೀಠ, ಎಸ್‌.ಭಾರತಿ ಎಂಬುವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಹ ಶಿಕ್ಷಕಿಯನ್ನಾಗಿ ನೇಮಿಸುವ ಕುರಿತಾಗಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ನಿರ್ದೇಶನಗಳನ್ನು ತಳ್ಳಿಹಾಕಿದೆ. 

ADVERTISEMENT

‘ನೇಮಕಾತಿ ಮಾಡಲೇಬೇಕೆಂಬ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಯಾವುದೇ ಬಾಧ್ಯತೆ ಇಲ್ಲ ಎಂಬುದು ಸ್ಪಷ್ಟ. ಹೆಚ್ಚುವರಿ ಪಟ್ಟಿ ಪ್ರಕಟಿಸಿದ ಮಾತ್ರಕ್ಕೆ ಅದು ನೇಮಕಾತಿ ಸಂಬಂಧ ಯಾವುದೇ ಹಕ್ಕನ್ನು ಸೃಷ್ಟಿಸುವುದಿಲ್ಲ. 2001ರಲ್ಲಿ ತಿದ್ದುಪಡಿ ಮಾಡಲಾಗಿರುವ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳ (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) ನಿಯಮದಡಿ ಇಂತಹ ಯಾವುದೇ ಅಧಿಕಾರ ನೀಡಲಾಗಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ‘ಕಡ್ಡಾಯ ನಿಯಮಗಳು ಇದ್ದಾಗ ಮಾತ್ರವೇ ಹೆಚ್ಚುವರಿ ಪಟ್ಟಿಯಲ್ಲಿರುವವರನ್ನು ಖಾಲಿ ಹುದ್ದೆಗಳಿಗೆ ನೇಮಕ ಮಾಡಬೇಕೆಂಬ ಪ್ರಶ್ನೆ ಉದ್ಭವಿಸುತ್ತದೆ. ಈ ರೀತಿಯ ನಿಯಮವೇ ಇಲ್ಲದಿರುವಾಗ ಇಂತಹ ಪಟ್ಟಿಯಲ್ಲಿರುವವರನ್ನು ಖಾಲಿ ಹುದ್ದೆಗಳಿಗೆ ನೇಮಿಸುವುದು ರಾಜ್ಯ ಸರ್ಕಾರದ ವಿವೇಚನೆಗೆ ಒಳಪಟ್ಟಿರುತ್ತದೆ’ ಎಂದು ತಿಳಿಸಿದೆ.

‘ನೇಮಕಾತಿ ಅಧಿಕಾರದ ಕುರಿತು ಹೈಕೋರ್ಟ್‌ ನೀಡಿರುವ ನಿರ್ಣಯವು ದೋಷದಿಂದ ಕೂಡಿದೆ’ ಎಂದೂ ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.