ಕೊಲ್ಕತ್ತಾ: ತಮ್ಮ ಕ್ಷೇತ್ರದಲ್ಲಿ (ನಂದಿಗ್ರಾಮ ವಿಧಾನಸಭೆ ಕ್ಷೇತ್ರದಲ್ಲಿ) ಸ್ಪರ್ಧಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಸವಾಲನ್ನು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಮಮತಾ ಅವರನ್ನು ಸೋಲಿಸುತ್ತೇನೆ, ಇಲ್ಲವೇ ರಾಜಕೀಯ ಬಿಡುತ್ತೇನೆ ಎಂದು ಅವರು ಹೇಳಿದ್ದಾರೆ.
ಆದರೂ, ನಂದಿಗ್ರಾಮ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹಾಕುವುದು ಅಂತಿಮವಾಗಿ ಪಕ್ಷದ ನಿರ್ಧಾರವಾಗಿರಲಿದೆ ಎಂದೂ ಸುವೇಂದು ಅಧಿಕಾರಿ ಹೇಳಿದ್ದಾರೆ.
ರಾಜಕೀಯವಾಗಿ ಪ್ರಾಧಾನ್ಯತೆ ಪಡೆದಿರುವ, ಸುವೇಂದು ಅಧಿಕಾರಿ ಅವರು ಈ ಹಿಂದೆ ಟಿಎಂಸಿಯಿಂದಲೇ ಗೆದ್ದಿದ್ದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿ, ಮಮತಾ ಬ್ಯಾನರ್ಜಿ ಸೋಮವಾರ ಅಚ್ಚರಿ ಮೂಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸುವೇಂದು ಅಧಿಕಾರಿ 'ನಂದಿಗ್ರಾಮ ಕ್ಷೇತ್ರದಿಂದ ಪಕ್ಷ ನನ್ನನ್ನು ಕಣಕ್ಕಿಳಿಸಿದರೆ, ನಾನು ಅವರನ್ನು ಕನಿಷ್ಠ 50,000 ಮತಗಳ ಅಂತರದಿಂದ ಸೋಲಿಸುತ್ತೇನೆ. ಇಲ್ಲವಾದರೆ, ನಾನು ರಾಜಕೀಯವನ್ನು ತೊರೆಯುತ್ತೇನೆ' ಎಂದು ಹೇಳಿದರು.
'ನನ್ನನ್ನು ಎಲ್ಲಿಂದ ಕಣಕ್ಕಿಳಿಸಲಾಗುತ್ತದೆ ಎಂದುಗೊತ್ತಿಲ್ಲ. ಆದರೆ, ನಂದಿಗ್ರಾಮದಿಂದ ಕಣಕ್ಕಿಳಿಸಿದರೆ ಮಮತಾರನ್ನು ಸೋಲಿಸುವೆ. ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಅವರಿಂದ 'ನಿರಂಕುಶವಾಗಿ' ನಡೆಯುತ್ತಿರುವ ಟಿಎಂಸಿಯಂತಲ್ಲದೆ, ಬಿಜೆಪಿಯಲ್ಲಿ ಚರ್ಚೆಯ ನಂತರ ಅಭ್ಯರ್ಥಿಗಳನ್ನು ನಿರ್ಧರಿಸಲಾಗುತ್ತದೆ,' ಎಂದು ಅಧಿಕಾರಿ ಹೇಳಿದ್ದಾರೆ.
'ಚುನಾವಣೆಗೆ ಮೊದಲು ಮಮತಾ ಬ್ಯಾನರ್ಜಿ ನಂದಿಗ್ರಾಮವನ್ನು ನೆನಪಿಸಿಕೊಳ್ಳುತ್ತಾರೆ. ನಂದಿಗ್ರಾಮದಲ್ಲಿ ಗುಂಡಿನ ದಾಳಿ ನಡೆಸಿದ್ದ ಐಪಿಎಸ್ ಅಧಿಕಾರಿಗೆ ಅವರು ನಾಲ್ಕು ಬಾರಿ ಬಡ್ತಿ ನೀಡಿದ್ದಾರೆ,' ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.