ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಮೈತ್ರಿ ಕುದುರದೇ ಇರುವುದಕ್ಕೆ ರಾಜ್ಯದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಕಾರಣ ಎಂದು ಟಿಎಂಸಿ ನಾಯಕ ಡೆರೆಕ್ ಒಬ್ರಯಾನ್ ಆರೋಪಿಸಿದ್ದಾರೆ.
ಪಕ್ಷ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಚೌಧರಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಇತರ ನಾಯಕರು ಟಿಎಂಸಿ ವಿರುದ್ಧ ದಾಳಿ ನಡೆಸುತ್ತಿಲ್ಲ. ಆದಾಗ್ಯೂ, ಅಧೀರ್ ರಂಜನ್ ಚೌಧರಿ ವಿರುದ್ಧ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟಿಎಂಸಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ಣೂ ಒಂದು ಹೆಜ್ಜೆ ಮುಂದೆ ಹೋಗಿ, ಪಕ್ಷದ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯಾನ್ ಅವರು, ‘ಇಂಡಿಯಾ ಮೈತ್ರಿಕೂಟ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡದಿರುವುದಕ್ಕೆ ಮೂರು ಕಾರಣಗಳಿವೆ. ಅವು, ಅಧೀರ್, ಅಧೀರ್ ಹಾಗೂ ಅಧೀರ್’ ಎಂದು ಹೇಳಿದ್ದಾರೆ.
‘ಸ್ವತಃ ಅಧೀರ್ ರಂಜನ್ ಚೌಧರಿ ಅವರೇ ತಮ್ಮ ಪಕ್ಷದ ಸಮಾಧಿ ಅಗೆಯುತ್ತಿದ್ದಾರೆ’ ಎಂದೂ ಡೆರೆಕ್ ಕುಟುಕಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ ಒಂದು ದಿನದ ನಂತರ ಒಬ್ರಯಾನ್ ಪ್ರತಿಕ್ರಿಯೆ ಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಕಾರ್ಯರೂಪಕ್ಕೆ ಬಾರದಿರಲು ಚೌಧರಿ ಕಾರಣ ಎಂದು ಪ್ರತಿಪಾದಿಸಿದ ಒಬ್ರಯಾನ್, ಇಂಡಿಯಾ ಬಣ ಅನೇಕ ವಿರೋಧಿಗಳನ್ನು ಹೊಂದಿದೆ. ಅವರ ಪೈಕಿ ಬಿಜೆಪಿ ಮತ್ತು ಚೌಧರಿ ಇಬ್ಬರು ಮಾತ್ರ ಬಣದ ವಿರುದ್ಧ ಪದೇ ಪದೇ ಮಾತನಾಡುತ್ತಿದ್ದಾರೆ ಎಂದು ದೂರಿದರು. .
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗಣನೀಯ ಸಂಖ್ಯೆಯ ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸಿದರೆ, ತೃಣಮೂಲ ಕಾಂಗ್ರೆಸ್ ಸಂವಿಧಾನವನ್ನು ನಂಬುವ ಮತ್ತು ಅದಕ್ಕಾಗಿ ಹೋರಾಡುವ ಬಣದ ಭಾಗವಾಗಿರುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು. .
ಮೈತ್ರಿಯಲ್ಲಿ ಒಡಕಿನ ಕುರಿತಂತೆ ಬುಧವಾರ ಮಮತಾ ಬ್ಯಾನರ್ಜಿಯವರ ಹಠಾತ್ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಎಚ್ಚೆತ್ತಿತು. ಪ್ರತಿಪಕ್ಷಗಳ ಇಂಡಿಯಾ ಬಣವನ್ನು ಮಮತಾ ಬ್ಯಾನರ್ಜಿ ಇಲ್ಲದೆ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿಜೈರಾಮ್ ರಮೇಶ್ ಹೇಳಿದ್ದರು.
‘ಇಂಡಿಯಾ’ ವಿರುದ್ಧ ಅಧೀರ್ ರಂಜನ್ ಚೌಧರಿ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮಾತುಗಳಿಗೆ ಧ್ವನಿಯಾಗಿದ್ದಾರಷ್ಟೆ.–ಡೆರೆಕ್ ಒಬ್ರಯಾನ್ ಟಿಎಂಸಿ ರಾಜ್ಯಸಭಾ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.