ಪ್ರಯಾಗ್‌ರಾಜ್ (ಉತ್ತರಪ್ರದೇಶ): ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನಿಂದ ಅಕ್ರಮ ಜಮೀನನ್ನು ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನಾ (ಪಿಎಂಎವೈ) ಅಡಿಯಲ್ಲಿ ನಿರ್ಮಿಸಲಾದ 76 ಮನೆಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಏಪ್ರಿಲ್‌ನಲ್ಲಿ ಮಾಜಿ ಸಂಸದ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಪೊಲೀಸರ ಬಿಗಿ ಭದ್ರತೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು.
ಮನೆಗಳ ಹಸ್ತಾಂತರ ಕಾರ್ಯಕ್ರಮ ‘ಗೃಹಪ್ರವೇಶ’ದಲ್ಲಿ ಮಾತನಾಡಿದ ಆದಿತ್ಯನಾಥ್, ‘ಬಡವರ ಜಮೀನನ್ನು ಮುಕ್ತಗೊಳಿಸುವ ಬದಲು ಹಿಂದಿನ ಸರ್ಕಾರವು ಮಾಫಿಯಾದೊಂದಿಗೆ ಕೈಜೋಡಿಸಿತ್ತು. ಆದರೆ, ಈಗಿನ ಸರ್ಕಾರ ಮಾಫಿಯಾದವರಿಂದ ವಶಪಡಿಸಿಕೊಂಡ ಜಮೀನಿನಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಡುತ್ತಿದೆ. ಈ ಕುರಿತು ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದರಿಂದ ಬಡವರಿಗೆ ಸೂರು ದೊರೆತು, ಸರ್ಕಾರದ ಮೇಲಿನ ನಂಬಿಕೆ ಹೆಚ್ಚಾಗುತ್ತದೆ’ ಎಂದರು.
‘ಕಳೆದ ಆರು ವರ್ಷಗಳಲ್ಲಿ ಪಿಎಂಎವೈ ಯೋಜನೆಯಡಿ ರಾಜ್ಯದಲ್ಲಿ 54 ಲಕ್ಷ ಬಡಜನರಿಗೆ ಮನೆಗಳನ್ನು ಮಂಜೂರು ಮಾಡಲಾಗಿದ್ದು, ಶೀಘ್ರವೇ ಇನ್ನೂ 10ಲಕ್ಷಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.
‘ಆರು ವರ್ಷಗಳ ಹಿಂದೆ ಈ ಯೋಜನೆಯಡಿ ಒಬ್ಬನೇ ಒಬ್ಬ ಬಡವನಿಗೂ ಮನೆ ಮಂಜೂರು ಮಾಡಿರಲಿಲ್ಲ. ಏಕೆಂದರೆ ಬಡವರಿಗೆ ಸೂರು ಒದಗಿಸುವ ಕುರಿತು ಆಗಿನ ಸರ್ಕಾರ ಚಿಂತನೆ ಮಾಡಲಿಲ್ಲ. ಕೇಂದ್ರ ಸರ್ಕಾರ ನಿವೇಶನ ನೀಡುವಂತೆ ಪತ್ರ ಬರೆಯುತ್ತಿತ್ತು. ಆದರೆ, ರಾಜ್ಯ ಸರ್ಕಾರ ಮನೆಗಳನ್ನು ಒದಗಿಸುವ ಇಚ್ಛೆ ತೋರಲಿಲ್ಲ’ ಎಂದು ಆರೋಪಿಸಿದರು.
ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರದ (ಪಿಡಿಎ) ಪ್ರಕಾರ, ಒಂದು ಬೆಡ್‌ರೂಂನ ಪ್ರತಿ ಫ್ಲ್ಯಾಟ್‌ಗೆ ಒಟ್ಟು ₹ 6 ಲಕ್ಷ ವೆಚ್ಚವಾಗಿದ್ದು, ಫಲಾನುಭವಿಗಳು ₹ 3.5 ಲಕ್ಷ ನೀಡಿದ್ದರೆ, ಉಳಿದ ಮೊತ್ತದಲ್ಲಿ ಕೇಂದ್ರ ಸರ್ಕಾರ ₹ 1.5 ಲಕ್ಷ ಹಾಗೂ ರಾಜ್ಯ ಸರ್ಕಾರ ₹ 1ಲಕ್ಷ ನೀಡಿವೆ.
ಸಮಾರಂಭದಲ್ಲಿ ಆದಿತ್ಯನಾಥ ಅವರು ₹ 768 ಕೋಟಿ ವೆಚ್ಚದ 226 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ರಾಜ್ಯ ಸಚಿವರಾದ ನಂದಗೋಪಾಲ್ ಗುಪ್ತಾ, ಸಂಸದರಾದ ರೀಟಾ ಬಹುಗುಣ ಜೋಷಿ, ಕೇಸರಿ ದೇವಿ ಪಟೇಲ್, ಶಾಸಕ ಸಿದ್ಧಾರ್ಥ್ ನಾಥ್ ಸಿಂಗ್, ಮೇಯರ್ ಗಣೇಶ್ ಕೇಸರ್‌ವಾಣಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.