ADVERTISEMENT

‘ವಿಶೇಷ ದತ್ತು ಸಂಸ್ಥೆ’ ಸ್ಥಾಪಿಸದ್ದಕ್ಕೆ ಸುಪ್ರೀಂ ಕೋರ್ಟ್‌ ಅಸಮಾಧಾನ

ಆ.30ರ ಒಳಗೆ ವರದಿ ಸಲ್ಲಿಸಲು ಸೂಚನೆ | ತಪ್ಪಿದಲ್ಲಿ ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ

ಪಿಟಿಐ
Published 9 ಜುಲೈ 2024, 16:18 IST
Last Updated 9 ಜುಲೈ 2024, 16:18 IST
–
   

ನವದೆಹಲಿ: ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುವಂತೆ ಮಾಡುವುದಕ್ಕಾಗಿ ರೂಪಿಸಿರುವ ‘ವಿಶೇಷ ದತ್ತು ಸಂಸ್ಥೆ’ಗಳನ್ನು (ಎಸ್‌ಎಎ) ದೇಶದ 760ರ ಪೈಕಿ 370 ಜಿಲ್ಲೆಗಳಲ್ಲಿ ಸ್ಥಾಪಿಸದೇ ಇರುವುದಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ವಿಶೇಷ ದತ್ತು ಸಂಸ್ಥೆಗಳ ಸ್ಥಾಪನೆ ಸಂಬಂಧ ಹೊರಡಿಸಿರುವ ಆದೇಶ ಪಾಲನೆ ಮಾಡಿ ಇಲ್ಲವೇ ನ್ಯಾಯಾಂಗ ನಿಂದನೆ ಕ್ರಮ ಎದುರಿಸಿ ಎಂದು 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠ, ಆಗಸ್ಟ್‌ 30ರ ಒಳಗಾಗಿ ಆದೇಶ ಪಾಲನೆ ಕುರಿತ ವರದಿ ಸಲ್ಲಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.

ADVERTISEMENT

ಒಂದು ವೇಳೆ, ಈ ವರದಿಯನ್ನು ಸಲ್ಲಿಸುವಲ್ಲಿ ವಿಫಲರಾದಲ್ಲಿ, ಸೆಪ್ಟೆಂಬರ್‌ 2ರಂದು ನ್ಯಾಯಾಲಯಕ್ಕೆ ಹಾಜರಾಗಿ, ತಮ್ಜ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಯಾಕೆ ಜರುಗಿಸಬಾರದು ಎಂಬುದಕ್ಕೆ ಸೂಕ್ತ ವಿವರಣೆ ನೀಡುವಂತೆಯೂ ಸೂಚಿಸಿದೆ.

ಪ್ರತಿ ಜಿಲ್ಲೆಯಲ್ಲಿಯೂ ‘ವಿಶೇಷ ದತ್ತು ಸಂಸ್ಥೆ’ ಸ್ಥಾಪಿಸಬೇಕು ಎಂದು 34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಜನವರಿ 31ರಂದು ಆದೇಶಿಸಿತ್ತು. ಇವುಗಳ ಪೈಕಿ, ರಾಜ್ಯಗಳಾದ ಕರ್ನಾಟಕ, ಕೇರಳ, ರಾಜಸ್ಥಾನ ಮತ್ತು ಗೋವಾ, ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢ ಮಾತ್ರ ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ಅನುಷ್ಠಾನಕ್ಕೆ ತಂದಿವೆ. 

ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಯನ್ನು ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಕೋರಿ ‘ದಿ ಟೆಂಪಲ್‌ ಆಫ್ ಹೀಲಿಂಗ್‌’ ಎಂಬ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.