ADVERTISEMENT

350ಕ್ಕೂ ಹೆಚ್ಚು ಜನಪ್ರತಿನಿಧಿಗಳಿಗೆ ಕ್ರಿಮಿನಲ್‌ ಹಿನ್ನೆಲೆ

ಬಿಜೆಪಿಗೆ ಅಗ್ರಸ್ಥಾನ, ನಂತರದ ಸ್ಥಾನದಲ್ಲಿ ಕಾಂಗ್ರೆಸ್‌

ಪಿಟಿಐ
Published 23 ಆಗಸ್ಟ್ 2021, 21:45 IST
Last Updated 23 ಆಗಸ್ಟ್ 2021, 21:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ಸಂಸದರು, ಶಾಸಕರು ಸೇರಿದಂತೆ 363 ಜನಪ್ರತಿನಿಧಿಗಳ ವಿರುದ್ಧ ಅಪರಾಧ ಪ್ರಕರಣಗಳಿವೆ. ಅಪರಾಧವು ಸಾಬೀತಾದರೆ ಇವರೆಲ್ಲರೂ ಜನಪ್ರಾತಿನಿಧ್ಯ ಕಾಯ್ದೆ ಪ‍್ರಕಾರ ಅನರ್ಹಗೊಳ್ಳಲಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಅಧ್ಯಯನವು ಹೇಳಿದೆ.

ಕೇಂದ್ರ ಮತ್ತು ರಾಜ್ಯಗಳ 39 ಸಚಿವರ ವಿರುದ್ಧವೂ ಅಪರಾಧ ಪ್ರಕರಣಗಳು ಇವೆ. ಇವೆಲ್ಲವೂ ಜನಪ್ರಾತಿನಿಧ್ಯ ಕಾಯ್ದೆ ಅಡಿಯಲ್ಲಿ ಅನರ್ಹತೆಗೆ ಕಾರಣ ಆಗಬಹುದಾದ ಅಪರಾಧಗಳೇ ಆಗಿವೆ ಎಂದು ಎಡಿಆರ್‌ ವರದಿಯು ಹೇಳಿದೆ.

ಕಾಯ್ದೆಯ 8ನೇ ಸೆಕ್ಷನ್‌ನ 1,2, ಮತ್ತು 3ನೇ ಉಪ ಸೆಕ್ಷನ್‌ ಅಡಿಯಲ್ಲಿ ಪಟ್ಟಿ ಮಾಡಲಾದ ಅಪರಾಧ ಕೃತ್ಯಗಳನ್ನು ಎಸಗಿದ್ದು ಸಾಬೀತಾದರೆ ಅಂತಹ ಜನಪ್ರತಿನಿಧಿಗಳು ತೀರ್ಪಿನ ದಿನಾಂಕದಿಂದ ಆರು ವರ್ಷಗಳ ವರೆಗೆ ಅನರ್ಹಗೊಳ್ಳುತ್ತಾರೆ. ಈ ಸಚಿವರ ವಿರುದ್ಧ ಈ ಉಪ ಸೆಕ್ಷನ್‌ ಅಡಿಯಲ್ಲಿ ಪಟ್ಟಿ ಮಾಡಲಾದ ಅಪರಾಧ ಕೃತ್ಯಗಳೇ ದಾಖಲಾಗಿವೆ.

ADVERTISEMENT

ಅಪರಾಧ ಹಿನ್ನೆಲೆಯ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದ್ದು, ಪಕ್ಷದ 83 ಮಂದಿ ಇದ್ದಾರೆ.

ಅಪರಾಧ ಹಿನ್ನೆಲೆ ಇರುವವರಲ್ಲಿ 24 ಸಂಸದರು ಮತ್ತು 111 ಶಾಸಕರ ವಿರುದ್ಧ ಇನ್ನೂ ದಾವೆಗಳು ಚಾಲ್ತಿಯಲ್ಲಿದ್ದು, ಇವು ಸುಮಾರು 10 ವರ್ಷಗಳ ಹಿಂದೆ ದಾಖಲಾದ ಪ್ರಕರಣಗಳಾಗಿವೆ ಎಂದು ಅಧ್ಯಯನವು ತಿಳಿಸಿದೆ.

ಒಟ್ಟಾರೆ 542 ಸಂಸದರು, 1,953 ಶಾಸಕರು ಸಲ್ಲಿಸಿದ ಚುನಾವಣಾ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿರುವ ಎಡಿಆರ್‌,67 ಸಂಸದರು, 296 ಶಾಸಕರ ವಿರುದ್ಧ ಪ್ರಕರಣಗಳಿವೆ ಎಂದು ವಿವರ ನೀಡಿದೆ.

ಸಂಸದರ ವಿರುದ್ಧ ಸರಾಸರಿ ಆರು ವರ್ಷಗಳು ಹಾಗೂ ಶಾಸಕರ ವಿರುದ್ಧ ಸರಾಸರಿ ಏಳು ವರ್ಷಗಳಿಂದ ಈ ಪ್ರಕರಣ
ಗಳು ಬಾಕಿ ಉಳಿದಿವೆ. ಒಟ್ಟು 9 ಮಂದಿ ಜನಪ್ರತಿನಿಧಿಗಳ ವಿರುದ್ಧ ಸುಮಾರು 25 ವರ್ಷದ ಹಿಂದೆ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯನ್ನೂ ಈ ಸಮೀಕ್ಷೆ ಹೊರಹಾಕಿದೆ.

ಬಿಜೆಪಿ ಶಾಸಕ, ಬಿಹಾರದ ರಾಮನಾರಾಯಣ ಮಂಡಲ್‌ ವಿರುದ್ಧ 31 ವರ್ಷದಿಂದ ಪ್ರಕರಣ ಬಾಕಿ ಇದೆ. 1989ರಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 2010ರಲ್ಲಿ ನಿಯಮ ಮೀರಿ ಜನರ ಗುಂಪುಗೂಡಿಸುವಿಕೆ, ಮಾರಕಾಸ್ತ್ರಗಳ ಸಾಗಣೆ, ಹಲ್ಲೆ, ಸಂಚು ಸಂಬಂಧಿತ ಆರೋಪಗಳನ್ನು ದಾಖಲಿಸಲಾಗಿದೆ.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ಮನೋರಂಜನ್ ಬ್ಯಾಪಾರಿ ವಿರುದ್ಧವೂ 31 ವರ್ಷದ ಹಿಂದೆ ಪ್ರಕರಣ ದಾಖಲಾಗಿದ್ದರೂ, 2019ರ ಡಿಸೆಂಬರ್‌ನಲ್ಲಿ ಆರೋಪಗಳ ಪಟ್ಟಿ ಮಾಡಲಾಗಿದೆ. ಜೆಎಂಎಂನ ಮಿಥಿಲೇಶ್‌ ಕುಮಾರ್ ಠಾಕೂರ್‌, ಸೌಮ್ಯ ರಂಜನಾ ಪಟ್ನಾಯಿಕ್‌ ವಿರುದ್ಧ 29 ವರ್ಷದಿಂದ ಪ್ರಕರಣವಿದೆ.

ಎಡಿಆರ್‌ನ ವರದಿ ಅನುಸಾರ, ಕ್ರಿಮಿನಲ್‌ ಹಿನ್ನೆಲೆಯ ಜನಪ್ರತಿನಿಧಿಗಳಲ್ಲಿ ಬಿಜೆಪಿ ನಂತರದ ಸ್ಥಾನದಲ್ಲಿ ಕಾಂಗ್ರೆಸ್‌ ಇದ್ದು, ಈ ಪಕ್ಷದ ಸಂಸದರು ಮತ್ತು ಶಾಸಕರ ಪೈಕಿ47 ಮಂದಿ ವಿರುದ್ಧ ಪ್ರಕರಣಗಳಿವೆ. ಅಂತೆಯೇ, ತೃಣಮೂಲ ಕಾಂಗ್ರೆಸ್‌ನ 25, ಬಿಜೆಡಿ, ವೈಎಸ್‌ಆರ್ ಕಾಂಗ್ರೆಸ್‌, ಸಿಪಿಎಂನ ತಲಾ 22 ಜನಪ್ರತಿನಿಧಿಗಳು ಇದ್ದಾರೆ. ಉಳಿದಂತೆ ಡಿಎಂಕೆ 14, ಆರ್‌ಜೆಡಿ 14 ಮತ್ತು ಎಎಪಿ ಮತ್ತು ಶಿವಸೇನಾದ ತಲಾ 12 ಜನಪ್ರತಿನಿಧಿಗಳಿದ್ದಾರೆ.

2019ರ ಲೋಕಸಭೆ ಚುನಾವಣೆ ಯಲ್ಲಿ ಗರಿಷ್ಠ ಅಂದರೆ 67 ರಾಜ ಕಾರಣಿಗಳು ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ಇವೆ ಎಂದು ಘೋಷಿಸಿ ಕೊಂಡಿದ್ದರು. 2020ರ ಬಿಹಾರ ಚುನಾವಣೆಯಲ್ಲಿ 54, 2021ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ 42 ಮಂದಿ ತಮ್ಮ ವಿರುದ್ಧ ಕ್ರಿಮಿನಲ್‌ ಆರೋಪಗಳಿರುವುದನ್ನು ಘೋಷಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.