ಬೆಂಗಳೂರು: ಮಿಚಾಂಗ್ ಚಂಡಮಾರುತದಿಂದ ತತ್ತರಿಸಿರುವ ಚೆನ್ನೈ ಮಹಾನಗರದಲ್ಲಿ ಎಲ್ಲಿ ನೋಡಿದರಲ್ಲಿ ನೀರು. ಪರಿಹಾರ ಕಾರ್ಯಾಚರಣೆ ತ್ವರಿತವಾಗಿ ನಡೆಯುತ್ತಿದ್ದು, ಜೀವ ಹಾನಿ ಹಾಗೂ ನೂರಾರು ಕೋಟಿ ರೂಪಾಯಿಯಷ್ಟು ಆಸ್ತಿ–ಪಾಸ್ತಿ ಹಾನಿಯಾಗಿದೆ.
ಚಂಡಮಾರುತದಿಂದ ಸೃಷ್ಟಿಯಾಗುವ ಮಳೆ ಹಾಗೂ ಮಾನ್ಸೂನ್ ಮಳೆಯಲ್ಲಿ ನಮ್ಮ ದೇಶಗಳಲ್ಲಿನ ಡಾಂಬರು, ಸಿಮೆಂಟ್ ರಸ್ತೆಗಳು ನೀರು ಹಿಡಿದಿಟ್ಟುಕೊಳ್ಳದೇ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುತ್ತವೆ. ಇದರಿಂದ ನಗರಗಳಲ್ಲಿ ಪ್ರವಾಹ ಸೃಷ್ಟಿಯಾಗಿ ಎಲ್ಲೆಂದರಲ್ಲಿ ನೀರು ನುಗ್ಗುತ್ತದೆ.
ಇದಕ್ಕೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಅವರು ಪರಿಹಾರವೊಂದನ್ನು ಸೂಚಿಸಿದ್ದು ಅವರು ವಿದೇಶದಲ್ಲಿರುವ ತಂತ್ರಜ್ಞಾನದಿಂದ ಪ್ರಭಾವಿತರಾಗಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
‘ವಿಡಿಯೊದಲ್ಲಿ ತೋರಿಸಿರುವಂತೆ, ಆಧುನಿಕ ತಂತ್ರಜ್ಞಾನದಿಂದ ಡಾಂಬರು ರಸ್ತೆಗಳನ್ನು ನಿರ್ಮಿಸಬೇಕು. ಇದರಿಂದ ಚಂಡಮಾರುತ ಹಾಗೂ ಮಳೆಗಾಲದ ಸಂದರ್ಭದಲ್ಲಿ ನೀರು, ಡಾಂಬರು ರಸ್ತೆಗಳಿಂದ ಹರಿದು ಹೋಗದೇ ಅಲ್ಲಿಯೇ ಇಂಗಿದರೇ ಅಂತರ್ಜಲವಾಗಿ ಪರಿವರ್ತನೆಯಾಗುತ್ತದೆ. ಪ್ರವಾಹವೂ ಸೃಷ್ಟಿಯಾಗುವುದಿಲ್ಲ. ಈ ತಂತ್ರಜ್ಞಾನ ತುಂಬಾ ಪ್ರಭಾವಿಯಾಗಿದೆ’ ಎಂದು ಆನಂದ್ ಮಹೀಂದ್ರಾ ಅವರು ಚೆನ್ನೈ ಮಳೆ ಅನಾಹುತಗಳನ್ನು ಸ್ಮರಿಸಿಕೊಂಡು x ತಾಣದಲ್ಲಿ ಟ್ವೀಟ್ ಮಾಡಿದ್ದಾರೆ.
ಮಿಚಾಂಗ್ ಚಂಡಮಾರುತದಿಂದ ಉಂಟಾದ ಭಾರಿ ಗಾಳಿ, ಮಳೆಗೆ ಇದುವರೆಗೆ ಚೆನ್ನೈ ಸೇರಿದಂತೆ ತಮಿಳುನಾಡಿನಲ್ಲಿ 17 ಜನ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.