ADVERTISEMENT

ಸಂಬಂಧವೇ ಇಲ್ಲದ ಅಪಘಾತ ಪ್ರಕರಣವೊಂದರಲ್ಲಿ ಪೊಲೀಸ್ ಠಾಣೆ ಎದುರೇ ವಕೀಲರಿಗೆ ಥಳಿತ!

ಪಿಟಿಐ
Published 28 ಆಗಸ್ಟ್ 2021, 5:53 IST
Last Updated 28 ಆಗಸ್ಟ್ 2021, 5:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಫುಡ್ ಡೆಲಿವರಿ ಮಾಡುವ ಯುವಕನೊಬ್ಬ ಅಪಘಾತದಲ್ಲಿ ಮೃತಪಟ್ಟ ಬಳಿಕ ಅಲ್ಲಿ ಸೇರಿದ್ದ ಕೆಲವರು ಶುಕ್ರವಾರ ಮುಂಜಾನೆ ಕರೋಲ್‍‌ ಬಾಗ್ ಪೊಲೀಸ್ ಠಾಣೆಯ ಹೊರಗೆ ವಕೀಲರೊಬ್ಬರನ್ನು ಥಳಿಸಿ ದರೋಡೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತ ಮಾಡಿದ ಆರೋಪಿಗಳನ್ನು ರಕ್ಷಿಸಲೆಂದು ವಕೀಲರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಪ್ಪಾಗಿ ಭಾವಿಸಿದ್ದ ಸ್ಥಳೀಯರು ವಕೀಲರನ್ನು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ವಿನೋದ್ ಕುಮಾರ್ (45) ಎಂಬಾತ ಗುರುವಾರ ರಾತ್ರಿ ಫುಡ್ ಡೆಲಿವರಿ ಮಾಡಲು ಹೊರಟಿದ್ದಾಗ ರಚಿತ್ ಸಂಘಾಲ್ ಎಂಬಾತ ಚಾಲನೆ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಆತ ಕುಡಿದ ಅಮಲಿನಲ್ಲಿದ್ದ ಎಂದು ವರದಿಯಾಗಿದೆ.

ADVERTISEMENT

ಸಂತ್ರಸ್ತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಮೃತಪಟ್ಟಿದ್ದಾನೆ. ಬಳಿಕ ವಿನೋದ್ ಕುಮಾರ್ ಅವರ ಅನೇಕ ಸಹೋದ್ಯೋಗಿಗಳು ಮತ್ತು ಸಂಬಂಧಿಕರು ಕರೋಲ್ ಬಾಗ್ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ, ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ ಡೆಲಿವರಿ ಬಾಯ್‌ನ ಕುಟುಂಬಸ್ಥರು ಮತ್ತು ಸ್ನೇಹಿತರು ಆರೋಪಿಗೆ ಸಹಾಯ ಮಾಡಲು ವಕೀಲರು ಅಲ್ಲಿಗೆ ಬಂದಿದ್ದಾರೆ ಎಂದು ಭಾವಿಸಿದ್ದಾರೆ. ಈ ವೇಳೆ ಕೋಪಗೊಂಡ ಅವರು ಕಪೂರ್ ಅವರನ್ನು ಥಳಿಸಿದ್ದಾರೆ ಮತ್ತು ಐದು ಲಕ್ಷ ರೂಪಾಯಿ ಇದ್ದ ಅವರ ಬ್ಯಾಗ್ ಅನ್ನು ಕಿತ್ತುಕೊಂಡರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ನಂತರ, ತನಿಖಾ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಲಾಯಿತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಎಲ್ಲ ರೀತಿಯಿಂದಲೂ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.