ಬೆಂಗಳೂರು: ಭಾರತೀಯ ವಾಯುಪಡೆಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆಯಿಂದ 83 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸುವ₹ 48 ಸಾವಿರ ಕೋಟಿ ಮೊತ್ತದ ಒಪ್ಪಂದವನ್ನು ಕೇಂದ್ರ ಸರ್ಕಾರವು ಬುಧವಾರ ಅಂತಿಮಗೊಳಿಸಿದೆ.
ಏರೊಇಂಡಿಯಾ ವೈಮಾನಿಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಸಚಿವಾಲಯದ ಮಹಾನಿರ್ದೇಶಕ (ಖರೀದಿ) ವಿ.ಎಲ್.ಕಾಂತರಾವ್ ಅವರುರಕ್ಷಣಾ ಸಚಿವ ರಾಜಾನಾಥ ಸಿಂಗ್ ಸಮ್ಮುಖದಲ್ಲಿ ಎಚ್‌ಎಎಲ್‌ನ ಆಡಳಿತ ನಿರ್ದೇಶಕ ಆರ್.ಮಾಧವನ್ ಅವರಿಗೆ ಕರಾರುಪತ್ರವನ್ನು ಹಸ್ತಾಂತರಿಸಿದರು.
‘ದೇಸಿ ತಂತ್ರಜ್ಞಾನ ಆಧರಿಸಿ ಅಭಿವೃದ್ಧಿಪಡಿಸಿರುವ ಹೊಸ ಲಘು ಯುದ್ಧ ವಿಮಾನಗಳ ಖರೀದಿ ಖುಷಿ ಕೊಟ್ಟಿದೆ. ಬಹುಷಃ ಇದುದೇಸಿ ಸಂಸ್ಥೆಯಿಂದ ಸರ್ಕಾರ ಇದುವರೆಗೆ ಮಾಡಿಕೊಂಡಿರುವ ಅತ್ಯಂತ ದೊಡ್ಡ ಮೊತ್ತದ ಖರೀದಿಒಪ್ಪಂದವಾಗಿದೆ’ ಎಂದು ರಾಜಾನಾಥ್ ಸಿಂಗ್ ಹೇಳಿದರು.
‘ತೇಜಸ್ ದೇಶದಲ್ಲೇ ತಯಾರಿಸಿದ ಉತ್ಪನ್ನ ಮಾತ್ರವಲ್ಲ; ಈ ಮಾದರಿಯ ವಿದೇಶಿ ವಿಮಾನಗಳಿಗೆ ಹೋಲಿಸಿದರೆ ಇದು ಅನೇಕ ವಿಚಾರಗಳಲ್ಲಿ ಇದು ತೀರಾ ಅಗ್ಗವಾದುದು’ ಎಂದು ಸಿಂಗ್ ಅಭಿಪ್ರಾಯಪಟ್ಟರು.
ಎಚ್‌ಎಎಲ್ ಅಭಿವೃದ್ಧಿ ಪಡಿಸಿರುವ ತೇಜಸ್ ಒಂದು ಎಂಜಿನ್ ಹೊಂದಿರುವ, ಬಹುಕಾರ್ಯಗಳನ್ನು ನಿಭಾಯಿಸಬಲ್ಲ ಲಘು ಯುದ್ಧವಿಮಾನ. ಶಬ್ದಾತೀತ ವೇಗದಲ್ಲಿ ಸಾಗಬಲ್ಲ ತೇಜಸ್, ಬಲು ಅಪಾಯಕಾರಿ ಸನ್ನಿವೇಶಗಳಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾಗಿರುವ ಸಚಿವ ಸಂಪುಟದ ಭದ್ರತಾ ಉಪಸಮಿತಿಯು ತೇಜಸ್ ಎಂಕೆ–1 ಮಾದರಿಯ 73 ಯುದ್ಧ ವಿಮಾನಗಳ ಹಾಗೂ 10 ಎಲ್‌ಸಿಎ ತೇಜಸ್ ಎಂ.ಕೆ. ತರಬೇತಿ ವಿಮಾನಗಳ ಖರೀದಿಗೆ ಕಳೆದ ತಿಂಗಳು ಅನುಮೋದನೆ ನೀಡಿತ್ತು. ಈ ವಿಮಾನಗಳು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿವೆ.
‘ಭಾರತೀಯ ವಾಯುಪಡೆಗೆ ತೇಜಸ್ ವಿಮಾನಗಳ ಹಸ್ತಾಂತರ ಕಾರ್ಯ 2024ರ ಮಾರ್ಚ್‌ನಿಂದ ಆರಮಭವಾಗಲಿದೆ. ಪ್ರತಿ ವರ್ಷವೂ ಸುಮಾರು 16 ವಿಮಾನಗಳನ್ನು ಪೂರೈಸಲಾಗುವುದು. ಅನೇಕ ದೇಶಗಳು ತೇಜಸ್ ಖರೀದಿಗೆ ಆಸಕ್ತಿ ತೋರಿಸಿವೆ. ಮೊದಲ ರಫ್ತು ಮುಂದಿನ ಒಂದೆರಡು ವರ್ಷಗಳಲ್ಲೇ ಸಾಕಾರಗೊಳ್ಳುವ ನಿರೀಕ್ಷೆ ಇದೆ’ ಎಂದು ಮಾಧವನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.