ಕಾಬೂಲ್: ಆಘ್ಗಾನಿಸ್ತಾನದಲ್ಲಿ ಅಕ್ಷರಶಃ ಅರಾಜಕತೆ ಸೃಷ್ಟಿಯಾಗಿದೆ. ರಾಜಧಾನಿ ಕಾಬೂಲ್ ನಗರವನ್ನು ತಾಲಿಬಾನ್ ಉಗ್ರರು ಆಕ್ರಮಿಸುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದ್ದಾರೆ. ಆತಂಕಗೊಂಡ ಜನ ದೇಶ ಬಿಟ್ಟು ತೆರಳಲು ವಿಮಾನ ನಿಲ್ದಾಣಕ್ಕೆ ದೌಡಾಯಿಸುತ್ತಿದ್ದಾರೆ. ಆಫ್ಗಾನಿಸ್ತಾನದ 129 ಪ್ರಯಾಣಿಕರನ್ನು ಕಾಬೂಲ್‌ನಿಂದ ಹೊತ್ತು ತಂದ ಏರ್‌ಇಂಡಿಯಾ ವಿಮಾನವು ನವದೆಹಲಿಗೆ ಆಗಮಿಸಿದೆ. ವಿಮಾನದಿಂದ ಇಳಿದ ಕೂಡಲೇ ಪ್ರಯಾಣಿಕರು ಅಲ್ಲಿನ ಭಯಾನಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ನಾನು ಕಾಬೂಲ್ ಅನ್ನು ತೊರೆದಾಗ ತಾಲಿಬಾನ್ ಉಗ್ರರು ನಗರವನ್ನು ಆಕ್ರಮಿಸಿದ್ದರು. ಅಲ್ಲಿ ಇನ್ನುಮುಂದೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಏನೆಲ್ಲ ಆಗಿದೆಯೋ ಅದಕ್ಕೆಲ್ಲ ಅಶ್ರಫ್ ಘನಿಯೇ ಕಾರಣ. ಅವರು ಅಫ್ಘಾನಿಸ್ತಾನಕ್ಕೆ ದ್ರೋಹ ಮಾಡಿದ್ದಾರೆ. ಜನರು ಅವರನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ಆಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರ ಸೋದರ ಸಂಬಂಧಿ ಜಮೀಲ್ ಕರ್ಜೈ ಹೇಳಿದರು, ಜಗತ್ತು ಅಫ್ಗಾನಿಸ್ತಾನದ ಕೈಬಿಟ್ಟಿದೆ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಮ್ಮ ಸ್ನೇಹಿತರು ಕೊಲ್ಲಲ್ಪಡುತ್ತಾರೆ. ಮಹಿಳೆಯರಿಗೆ ಯಾವುದೇ ಹೆಚ್ಚಿನ ಹಕ್ಕುಗಳು ಅಲ್ಲಿ ಇರುವುದಿಲ್ಲ.ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಸ್ಥಳವಾಗಿರಲಿದೆ ಎಂದು ಕಾಬೂಲ್‌ನಿಂದ ದೆಹಲಿಗೆ ಬಂದ ಮಹಿಳೆಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.