ಗುವಾಹಟಿ: ಅಸ್ಸಾಂನ ನಾಲ್ಕು ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಅನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲಾಗಿದೆ.
ಈ ಸಂಬಂಧ ಅಸ್ಸಾಂ ಸರ್ಕಾರದ ರಾಜಕೀಯ ಇಲಾಖೆಯು ಅಧಿಸೂಚನೆ ಹೊರಡಿಸಿದೆ.
ಎಎಫ್‌ಎಸ್‌ಪಿಎ ಕಾಯ್ದೆ ಅಡಿಯಲ್ಲಿ ತಿನ್ಸೂಕಿಯಾ, ದಿಬ್ರೂಗಢ, ಚರಾಯ್‌ದೇವ್ ಮತ್ತು ಶಿವಸಾಗರ ಜಿಲ್ಲೆಗಳನ್ನು 'ಪ್ರಕ್ಷುಬ್ಧ ಪ್ರದೇಶ' ಎಂದು ಘೋಷಿಸಲಾಗಿದೆ ಎಂದು ತಿಳಿಸಿದೆ. ಈ ನಾಲ್ಕು ಜಿಲ್ಲೆಗಳಲ್ಲಿ 'ಆಫ್‌ಸ್ಪ' ಏಪ್ರಿಲ್ 1ರಿಂದ ಇನ್ನೂ ಆರು ತಿಂಗಳ ಕಾಲ ವಿಸ್ತರಣೆಯಾಗಲಿದೆ.
ನಾಲ್ಕು ಜಿಲ್ಲೆಗಳಲ್ಲಿ ಒಂದು ಭಯೋತ್ಪಾದಕ ಸಂಘಟನೆ ಸಕ್ರಿಯವಾಗಿರುವುದನ್ನು ಬಿಟ್ಟರೆ ಕಾನೂನು ಸುವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಅಸ್ಸಾಂ ಪೂಲೀಸ್ ವರದಿ ಸಲ್ಲಿಸಿತ್ತು.
ಈ ಸಂಬಂಧ ರಾಜ್ಯ ಸರ್ಕಾರದ ಗೃಹ ಮತ್ತು ರಾಜಕೀಯ ಇಲಾಖೆಯು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು. ಆದರೆ 'ಪ್ರಕ್ಷುಬ್ಧ ಪ್ರದೇಶ'ಕ್ಕೆ ಸಂಬಂಧಿಸಿದಂತೆ ಇನ್ನೂ ಆರು ತಿಂಗಳ ಕಾಲ 'ಯಥಾಸ್ಥಿತಿ' ಕಾಯ್ದುಕೊಳ್ಳಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರದ ನಿರ್ದೇಶನದ ಮೇರೆಗೆ ಎಎಫ್‌ಎಸ್‌ಪಿಎ ಕಾಯ್ದೆಯನ್ನು 2024 ಸೆಪ್ಟೆಂಬರ್ 24ರವರೆಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕಾಯ್ದೆಯನ್ನು ಕೊನೆಯದಾಗಿ 2023 ಅಕ್ಟೋಬರ್ 1ರಂದು ಆರು ತಿಂಗಳವರೆಗೆ ವಿಸ್ತರಿಸಲಾಗಿತ್ತು.
ಸೇನೆಗೆ ವಿಶೇಷಾಧಿಕಾರವನ್ನು ನೀಡುವ 'ಆಫ್‌ಸ್ಪ' ಕಾಯ್ದೆ ಅಡಿಯಲ್ಲಿ ಭದ್ರತಾ ಪಡೆಗಳಿಗೆ ಎಲ್ಲಿ ಬೇಕಾದರೂ ಕಾರ್ಯಾಚರಣೆ ನಡೆಸಲು ಮತ್ತು ವಾರಂಟ್ ಇಲ್ಲದೆ ಯಾರನ್ನು ಬೇಕಾದರೂ ಬಂಧಿಸುವ ಅಧಿಕಾರ ಇರುತ್ತದೆ.
ಪ್ರತಿ ಆರು ತಿಂಗಳಿಗೊಮ್ಮೆ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಅವಧಿ ವಿಸ್ತರಣೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.