ಗುವಾಹಟಿ: ಸುಮಾರು ಎರಡು ವರ್ಷಗಳ ಬಳಿಕ ಈಶಾನ್ಯ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆ ಮತ್ತೆ ಆರಂಭವಾಗುತ್ತಿದೆ.
ಈಶಾನ್ಯ ವಿದ್ಯಾರ್ಥಿಗಳ ಸಂಘಟನೆಯ (ಎನ್‌ಇಎಸ್‌ಒ) ನಾಯಕರು ಮತ್ತು ಸದಸ್ಯರು ಈಶಾನ್ಯ ಪ್ರದೇಶ ಪ್ರತಿ ಜಿಲ್ಲೆ ಮತ್ತು ಉಪ–ವಿಭಾಗ ಮಟ್ಟದಲ್ಲಿ ಸಿಎಎ ರದ್ದತಿಗೆ ಮತ್ತು ಸ್ಥಳೀಯ ಸಮುದಾಯಗಳಿಗೆ ಸಾಂವಿಧಾನಿಕ ಸುರಕ್ಷತೆ ನೀಡುವಂತೆ ಆಗ್ರಹಿಸಿ ಬುಧವಾರ ಧರಣಿ ನಡೆಸಲಿದ್ದಾರೆ.
‘ಈಶಾನ್ಯದ ಜನ ಸಿಎಎ ಅನ್ನು ಸ್ವೀಕರಿಸಿಲ್ಲ ಮತ್ತು ಒಪ್ಪಿಕೊಳ್ಳುವುದೂ ಇಲ್ಲ. ಈ ಕಾಯ್ದೆಯು ಸ್ಥಳೀಯ ಜನರನ್ನೇ ಅಲ್ಪಸಂಖ್ಯಾತರನ್ನಾಗಿಸಲಿದೆ. ಈಶಾನ್ಯ ರಾಜ್ಯಗಳನ್ನು ಅಕ್ರಮ ವಲಸಿಗರ ‘ಡಂಪಿಂಗ್’ ಮೈದಾನವನ್ನಾಗಿ ಮಾಡಲಾಗದು. 1971ರ ಮಾರ್ಚ್ 24ರಿಂದ ಈವರೆಗೆ ವಲಸಿಗರನ್ನು ಸ್ವೀಕರಿಸುವ ಮೂಲಕ ಅಸ್ಸಾಂ ಸಂಕಷ್ಟ ಎದುರಿಸುತ್ತಿದೆ. ಇಂಥದ್ದಕ್ಕೆ ಅವಕಾಶ ನೀಡಲಾಗದು’ ಎಂದು ಎನ್‌ಇಎಸ್‌ಒದ ಮುಖ್ಯ ಸಲಹೆಗಾರ ಸಮುಜ್ಜಲ್ ಕುಮಾರ್ ಭಟ್ಟಾಚಾರ್ಯ ಹೇಳಿದ್ದಾರೆ.
ಎನ್‌ಇಎಸ್‌ಒ ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ತ್ರಿಪುರಾದ ಅನೇಕ ಸಮುದಾಯಗಳ ಮತ್ತು ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳನ್ನು ಒಳಗೊಂಡಿದೆ.
ಕೋವಿಡ್-19 ಲಸಿಕೆ ವಿತರಣೆ ಮುಗಿದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ವರ್ಷ ಫೆಬ್ರುವರಿಯಲ್ಲಿ ಹೇಳಿದ್ದರು.
2019ರ ಡಿಸೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಸತ್ತಿನಲ್ಲಿ ಅನುಮೋದನೆ ಪಡೆಯಲಾಗಿತ್ತು. ಇದರ ಪ್ರಕಾರ, 2014ರ ಡಿಸೆಂಬರ್ 14ಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬಂದಿರುವ ಮುಸ್ಲಿಮೇತರ ಹಿಂದೂ, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧ, ಜೈನರು ಮತ್ತು ಪಾರ್ಸಿಗಳಿಗೆ ಭಾರತದ ಪೌರತ್ವ ಒದಗಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.