ADVERTISEMENT

Article 370 Verdict | ಗೌರವಪೂರ್ವಕ ಅಸಮ್ಮತಿ: ಚಿದಂಬರಂ

ಪಿಟಿಐ
Published 11 ಡಿಸೆಂಬರ್ 2023, 16:17 IST
Last Updated 11 ಡಿಸೆಂಬರ್ 2023, 16:17 IST
ಪಿ. ಚಿದಂಬರಂ
ಪಿ. ಚಿದಂಬರಂ   

ನವದೆಹಲಿ: ‘ಸಂವಿಧಾನದ 370ನೆಯ ವಿಧಿಯ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ರೀತಿಯ ವಿಚಾರವಾಗಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಕುರಿತಂತೆ ನಾವು ಗೌರವಪೂರ್ವಕ ಅಸಮ್ಮತಿ ಹೊಂದಿದ್ದೇವೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.

ಕೋರ್ಟ್‌ ತೀರ್ಪನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು ಎಂದು ಹೇಳಿರುವ ಅವರು, ‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಪರಿಪೂರ್ಣ ಸ್ಥಾನಮಾನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕಾಂಗ್ರೆಸ್‌ ಕೂಡಾ ಇದನ್ನೇ ಯಾವಾಗಲೂ ಆಗ್ರಹಿಸುತ್ತಿತ್ತು. ಈ ದಿಸೆಯಲ್ಲಿ ಈ ತೀರ್ಪನ್ನು ಸ್ವಾಗತಿಸುತ್ತೇವೆ’ ಎಂದಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಪರಿಪೂರ್ಣ ಸ್ಥಾನಮಾನವನ್ನು ಕೂಡಲೇ ಪುನಃಸ್ಥಾಪಿಸಬೇಕು. ಲಡಾಕ್‌ ಜನರ ಆಶೋತ್ತರಗಳನ್ನು ಈಡೇರಿಸಬೇಕು. ವಿಧಾನಸಭೆ ಚುನಾವಣೆ ಶೀಘ್ರ ನಡೆಸಬೇಕು ಎಂದು ನಾವು ನಂಬಿದ್ದೇವೆ. ಅದಕ್ಕಾಗಿ 2024ರ ಸೆಪ್ಟೆಂಬರ್‌ 30ರವರೆಗೆ ಕಾಯುವ ಅಗತ್ಯವಿಲ್ಲ’ ಎಂದಿದ್ದಾರೆ.

ADVERTISEMENT

‘ಚುನಾವಣೆ ನಡೆದರೆ, ಸುಪ್ರೀಂ ಕೋರ್ಟ್‌ನಲ್ಲಿ ನಾವು ಚರ್ಚಿಸಿದ ಮಹತ್ವದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಅಲ್ಲಿಯ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ದೊರಕುತ್ತದೆ. ಈವರೆಗೂ ಅವರಿಗೆ ಅಂಥ ಅವಕಾಶ ನಿರಾಕರಿಸಲಾಗಿದೆ. ರಾಜ್ಯವೊಂದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ್ದು ಏಕೆ ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್‌ ಉತ್ತರ ನೀಡದೇ ಇದ್ದದ್ದು ಬೇಸರ ತರಿಸಿದೆ’ ಎಂದು ಚಿದಂಬರಂ ಹೇಳಿದ್ದಾರೆ. 

ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ, ‘ಸುಪ್ರೀಂ ಕೋರ್ಟ್‌ನ ತೀ‌ರ್ಪು ಈ ನೆಲದ ಕಾನೂನು ಆಗುತ್ತದೆ. ಹೀಗಾಗಿ ವಿಶೇಷ ಸ್ಥಾನಮಾನ ರದ್ದತಿ ಕುರಿತ ಚರ್ಚೆಯು ಇಲ್ಲಿಗೆ ಮುಕ್ತಾಯವಾಗಿದೆ. ಜಮ್ಮು ಮತ್ತು ಕಾಶ್ಮೀರದ ಎಲ್ಲರೂ ನಿರಂಕುಶ ಪ್ರಭುತ್ವಕ್ಕೆ ಬದಲಾಗಿ ಪ್ರಜಾಪ್ರಭುತ್ವಕ್ಕೆ ಬೇಡಿಕೆ ಇರಿಸುತ್ತಿದ್ದಾರೆ. ಆದರೆ, ಚುನಾಯಿತ ಸರ್ಕಾರದ ಕುರಿತು ಬಿಜೆಪಿ ಏಕೆ ಹೆದರುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.