ಇಂದೋರ್: ‘ಭಗವಂತ ಕೃಷ್ಣನ ಜನ್ಮಸ್ಥಳವಾದ ಮಥುರಾ ಕ್ಷೇತ್ರವನ್ನು ನಾನು ಸಂಸತ್‌ನಲ್ಲಿ ಪ್ರತಿನಿಧಿಸುತ್ತಿದ್ದೇನೆ. ಹೀಗಾಗಿ ಅಲ್ಲಿ ಭವ್ಯವಾದ ಮಂದಿರವೊಂದು ಇರಬೇಕೆಂದು ನಾನು ಆಶಿಸುತ್ತೇನೆ. ಮಥುರಾದಲ್ಲಿ ಈಗಾಗಲೇ ದೇವಾಲಯವಿದೆ. ಅದನ್ನು ಕಾಶಿ ವಿಶ್ವನಾಥ ಕಾರಿಡಾರ್ ರೀತಿ ಅಭಿವೃದ್ಧಿಪಡಿಸಬೇಕು,’ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.
‘ರಾಮ ಜನ್ಮಭೂಮಿ ಮತ್ತು ಕಾಶಿಯ ಮರುಸ್ಥಾಪನೆಯ ನಂತರ, ಸ್ವಾಭಾವಿಕವಾಗಿ ಮಥುರಾವನ್ನು ಅಭಿವೃದ್ಧಿಗೊಳಿಸುವುದು ಮುಖ್ಯವಾಗುತ್ತದೆ,’ ಎಂದು ಸಂಸದೆ ಭಾನುವಾರ ಇಂದೋರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಇಂದೋರ್‌ಗೆ ಆಗಮಿಸಿದ್ದ ಸಂಸದೆ ಹೇಮಾ ಮಾಲಿನಿ ಕಾಶಿಗೆ ತೆರಳುತ್ತಿರುವುದಾಗಿಯೂ ಹೇಳಿದರು.
‘ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾದ ಭಗವಾನ್ ಕೃಷ್ಣನ ಜನ್ಮಸ್ಥಳವಾದ ಮಥುರಾದ ಸಂಸದೆಯಾಗಿರುವುದರಿಂದ ಅಲ್ಲಿ ಭವ್ಯವಾದ ದೇವಾಲಯ ಇರಬೇಕು ಎಂದು ನಾನು ಹೇಳುತ್ತೇನೆ. ಈಗಾಗಲೇ ದೇವಸ್ಥಾನವಿದೆ. ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯಲ್ಲಿ ದೇವಾಲಯದಿಂದ ನದಿಗೆ ನೇರವಾಗಿ ಸಂಪರ್ಕ ಕಲ್ಪಿಸಲಾಗಿದೆ. ಕಾಶಿಯಂತೇ ಮಥುರಾವನ್ನೂ ಸುಂದರಗೊಳಿಸಬಹುದು,‘ ಎಂದು ಅವರು ಹೇಳಿದರು.
‘ಕಾಶಿ ವಿಶ್ವನಾಥನ ನವೀಕರಣ ಮತ್ತು ಪುನರ್ ಅಭಿವೃದ್ಧಿ ಬಹಳ ಕಷ್ಟಕರವಾಗಿತ್ತು. ಇದು ಮೋದಿಯವರ ದೂರದೃಷ್ಟಿಯನ್ನು ತೋರಿಸುತ್ತದೆ. ಅದೇ ಮಥುರಾದಲ್ಲಿಯೂ ಆಗಲಿದೆ,’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.