ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಕ್ರಿಸ್ ಮಸ್ ಮುಗಿದ ನಂತರ ಮಾತುಕತೆಗೆ ಆಹ್ವಾನಿಸಿರುವ ಅಮಿತ್ ಶಾ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿ ಭರವಸೆ ನೀಡಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ರಾಜ್ಯಗಳಲ್ಲಿ ಮೇಘಾಲಯವು ಒಂದು. ಈ ರಾಜ್ಯದಲ್ಲಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ರಾಜಧಾನಿ ಶಿಲ್ಲಾಂಗ್‌ನಲ್ಲಿ ಕಳೆದ ಒಂದು ವಾರದಿಂದಲೂ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಸಂಬಂಧ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದರು. ಅಲ್ಲದೆ ಈ ಕಾಯ್ದೆಯಲ್ಲಿರುವ ಕೆಲವು ನ್ಯೂನತೆಗಳನ್ನು ಸರಿಪಡಿಸಬೇಕೆಂದು ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಶಾ ಕ್ರಿಸ್ ಮಸ್ ಹಬ್ಬ ಮುಗಿದ ಕೂಡಲೆ ಈ ಕುರಿತು ಚರ್ಚಿಸಿ ರಚನಾತ್ಮಕ ಪರಿಹಾರ ಕಂಡು ಹಿಡಿಯೋಣ ಎಂದು ಭರವಸೆ ನೀಡಿದರು ಎಂದು ಸಂಗ್ಮಾ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಂಗ್ಮಾ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದರೆ, ಪಾಕಿಸ್ತಾನ, ಅಫ್ಘನಿಸ್ತಾನ, ಬಾಂಗ್ಲಾ ದೇಶಗಳಿಂದ ವಲಸೆ ಬರುವ ಮುಸ್ಲಿಮೇತರ ಧರ್ಮದವರಿಗೆ ಮಾತ್ರ ಪೌರತ್ವ ನೀಡಲು ಅವಕಾಶವಿದೆ. ಇದು ಮೇಘಾಲಯದ ಬುಡಕಟ್ಟು ಜನಾಂಗವನ್ನೇ ದುರ್ಬಲಗೊಳಿಸುತ್ತದೆ ಎಂದು ಸಂಗ್ಮಾ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಇದನ್ನು ವಿರೋಧಿಸಿ ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಪೊಲೀಸರು ಕರ್ಫ್ಯೂ ವಿಧಿಸಿದ್ದಾರೆ.
ಅಮಿತ್ ಶಾ ಈ ಸಂಬಂಧ ಜಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ, ಮೇಘಾಲಯದ ಮುಖ್ಯಮಂತ್ರಿ ಹಾಗೂ ಅವರ ಸಹೋದ್ಯೋಗಿಗಳು ಈ ಕಾಯ್ದೆಯಿಂದ ತೊಂದರೆಯಾಗುತ್ತದೆ ಎನ್ನುತ್ತಾರೆ. ಆದರೆ, ಕಾಯ್ದೆಯಲ್ಲಿ ಯಾವುದೇ ತೊಂದರೆ ಇಲ್ಲ ಎಂದು ನಾನು ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದೆ. ಆದರೂ ಅವರು ಕಾಯ್ದೆಯಲ್ಲಿ ಸ್ವಲ್ಪ ಬದಲಾವಣೆ ತರಬೇಕು ಎಂದಿದ್ದಾರೆ.
ಅದಕ್ಕಾಗಿ ನಾನು ಸಂಗ್ಮಾ ಅವರಿಗೆ ಹೇಳಿದ್ದೇನೆ. ಕ್ರಿಸ್ ಮಸ್ ಮುಗಿದ ನಂತರ ಬಿಡುವು ಮಾಡಿಕೊಂಡು ಬನ್ನಿ ಎಲ್ಲರೂ ಒಟ್ಟಾಗಿ ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯೋಣ, ಯಾವುದೇ ಭಯ ಬೇಡ ಎಂದು ಹೇಳಿದ್ದೇನೆ ಎಂದಿದ್ದಾರೆ.
ಶಿಲ್ಲಾಂಗ್ ನಲ್ಲಿ ಇನ್ನೂ ಕರ್ಫ್ಯೂ ಮುಂದುವರಿದಿದೆ. ಸಂಜೆ ವೇಳೆಗೆ ಪರಿಸ್ಥಿತಿ ಹತೋಟಿಗೆ ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
ತಿದ್ದುಪಡಿ ಮಸೂದೆಗೆ ಶುಕ್ರವಾರ ರಾಷ್ಟ್ರಪತಿ ಅಂಕಿತ ಹಾಕಿದ್ದು ಆ ದಿನದಿಂದ ಜಾರಿಗೆ ಬಂದಿದೆ.
ಮೇಘಾಲಯ ರಾಜಭವನದ ಸಮೀಪ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಕ್ಲಲುತೂರಾಟ ನಡೆಸಿದ್ದರಿಂದ ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಸಂಗ್ಮಾ ಅವರು ಇಲ್ಲಿನ ವಿಲಿಯಮ್ ನಗರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಅವರನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಗೇಲಿ ಮಾಡಿದ್ದರು. ಇವೆಲ್ಲಾ ಬೆಳವಣಿಗೆಗಳ ಕಾರಣ ಮೇಘಾಲಯದಲ್ಲಿ ಮೊಬೈಲ್ ಇಂಟರ್ ನೆಟ್, ಎಸ್ ಎಂಎಸ್ ಸೇವೆಗಳನ್ನು ಸ್ಥಳೀಯ ಸರ್ಕಾರ ಸ್ಥಗಿತಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.