ADVERTISEMENT

ಕೇರಳ ದುರಂತ: ಅಮಿತ್ ಶಾ ವಿರುದ್ಧ ಸಿಪಿಐನಿಂದಲೂ ಹಕ್ಕುಚ್ಯುತಿ ನೋಟಿಸ್

ಪಿಟಿಐ
Published 4 ಆಗಸ್ಟ್ 2024, 12:41 IST
Last Updated 4 ಆಗಸ್ಟ್ 2024, 12:41 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

ನವದೆಹಲಿ: ವಯನಾಡ್‌ನ ಭೂಕುಸಿತ ಕುರಿತು ಕೇರಳ ಸರ್ಕಾರಕ್ಕೆ ಮುನ್ಸೂಚನೆ ನೀಡಿದ್ದರೂ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಸಭೆಯ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿ ಸಿಪಿಐ(ಎಂ), ಸಿಪಿಐ ಹಕ್ಕುಚ್ಯುತಿ ಮಂಡಿಸಿವೆ. ಕಾಂಗ್ರೆಸ್‌ ಕೂಡ ಇದೇ ನಿರ್ಧಾರ ತೆಗೆದುಕೊಂಡಿದೆ.

‘ವಯನಾಡ್‌ನ ಭೂಕುಸಿತದ ಕುರಿತು ಜುಲೈ 23, 24, 25 ಹಾಗೂ 26ರಂದು ಕೇರಳ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು, ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರೆ, ಹಲವು ಜೀವಗಳನ್ನು ಉಳಿಸಬಹುದಾಗಿತ್ತು’ ಎಂದು ಬುಧವಾರ ಗಮನಸೆಳೆಯುವ ಸೂಚನೆ ಮಂಡನೆ ವೇಳೆ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದರು. ಕೇಂದ್ರದ ಆರೋಪವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟವಾಗಿ ನಿರಾಕರಿಸಿದ್ದರು.

ADVERTISEMENT

ಸಿಪಿಐ (ಎಂ) ಪರವಾಗಿ ರಾಜ್ಯಸಭಾ ಸಂಸದ ವಿ. ಶಿವದಾಸನ್‌, ಸಿಪಿಐ ಪಕ್ಷದ ಸದನದ ನಾಯಕ ಪಿ.ಸಂತೋಷ್‌ ಕುಮಾರ್‌ ಅವರು ಶನಿವಾರ ಪ್ರತ್ಯೇಕವಾಗಿ ನೋಟಿಸ್‌ ಸಲ್ಲಿಸಿದ್ದು, ಗೃಹ ಸಚಿವರ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡಬೇಕು ಎಂದು ರಾಜ್ಯಸಭಾ ಸಭಾಪತಿ ಜಗದೀಪ್‌ ಧನ್‌ಕರ್‌ಗೆ ಮನವಿ ಮಾಡಿದ್ದಾರೆ.

ಸಿಪಿಎಂ ಸಂಸದರಾದ ವಿ.ಶಿವದಾಸನ್‌, ಜಾನ್‌ ಬಿಟ್ಟಾಸ್, ಎ.ಎ. ರಹೀಂ ಅವರು ಪತ್ರ ಬರೆದಿದ್ದು, ಶಾ ಅವರ ಹೇಳಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಇದೇ ಆರೋಪದ ಮೇಲೆ ಕಾಂಗ್ರೆಸ್‌ ಕೂಡ ಹಕ್ಕುಚ್ಯುತಿ ಮಂಡಿಸಿದೆ.

‘ಅಮಿತ್‌ ಶಾ ಅವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ವಿಸ್ತೃತವಾಗಿ ಪರಿಶೀಲಿಸಲಾಗಿದ್ದು, ತಪ್ಪು ಹೇಳಿಕೆ ನೀಡುವ ಮೂಲಕ ರಾಜ್ಯಸಭೆಯ ದಿಕ್ಕು ತಪ್ಪಿಸಿದ್ದಾರೆ’ ಎಂದು ಕಾಂಗ್ರೆಸ್‌ನ ಮುಖ್ಯ ಸಚೇತಕ ಜೈ ರಾಂ ರಮೇಶ್‌ ಅವರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಉಪನಾಯಕರಾಗಿರುವ ಪ್ರಮೋದ್‌ ತಿವಾರಿ ಹಾಗೂ ಸಂಸದ ದಿಗ್ವಿಜಯ್‌ ಸಿಂಗ್ ಕೂಡ ಈ ಪತ್ರಕ್ಕೆ ಸಹಿಹಾಕಿದ್ದು, ಗೃಹ ಸಚಿವ ಶಾ ಅವರು ಸದನವನ್ನು ಅವಮಾನಿಸಿದ್ದಾರೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.