ADVERTISEMENT

ನ್ಯಾಯಾಧೀಶರ ಭದ್ರತೆ ಕುರಿತು ವರದಿ ನೀಡಲು ರಾಜ್ಯಸರ್ಕಾರಗಳಿಗೆ ಸುಪ್ರೀಂ ಸೂಚನೆ

ಪಿಟಿಐ
Published 6 ಆಗಸ್ಟ್ 2021, 8:59 IST
Last Updated 6 ಆಗಸ್ಟ್ 2021, 8:59 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ನ್ಯಾಯಾಧೀಶರ ಮೇಲಿನ ಹಲ್ಲೆ ಮತ್ತು ಬೆದರಿಕೆಯಂತಹ ಘಟನೆಗಳನ್ನು ‘ಗಂಭೀರ‘ ಎಂದು ಪರಿಗಣಿಸಿರುವ ಸುಪ್ರೀಂಕೋರ್ಟ್‌, ದೇಶದಲ್ಲಿರುವ ನ್ಯಾಯಾಂಗ ಅಧಿಕಾರಿಗಳಿಗೆ ಒದಗಿಸುತ್ತಿರುವ ಭದ್ರತೆಯ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ಶುಕ್ರವಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.‌

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು, ಧನ್‌ಬಾದ್‌ನ ನ್ಯಾಯಾಧೀಶರ ಸಾವಿನ ಪ್ರಕರಣದ ವಿಚಾರಣೆ ವೇಳೆ ದೇಶದಲ್ಲಿನ ನ್ಯಾಯಾಧೀಶರ ರಕ್ಷಣೆ ಕುರಿತು ಪ್ರಸ್ತಾಪಿಸಿದೆ.

ಇದೇ ವೇಳೆ, ನ್ಯಾಯಾಧೀಶರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಜಾರ್ಖಂಡ್ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ADVERTISEMENT

ಧನ್‌ಬಾದ್‌ ನ್ಶಾಯಾಧೀಶರಸಾವಿನ ಪ್ರಕರಣದ ವಿಚಾರಣೆಯನ್ನು ಸೋಮವಾರ (ಆ.9ರಂದು) ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ನ್ಯಾಯಪೀಠ, ಈ ಸಂಬಂಧಸಿಬಿಐಗೆ ನೋಟಿಸ್ ನೀಡುತ್ತಿರುವುದಾಗಿ ತಿಳಿಸಿತು.

‘ದೇಶದ ಹಲವು ರಾಜ್ಯಗಳಲ್ಲಿ ನ್ಯಾಯಾಧೀಶರಿಗೆ ಬೆದರಿಕೆಯೊಡ್ಡಿರುವ ಹಲವು ಪ್ರಕರಣಗಳ ಹಿಂದೆ ಪಾತಕಿಗಳು ಹಾಗೂ ಉನ್ನತ ಮಟ್ಟದ ವ್ಯಕ್ತಿಗಳಿದ್ದಾರೆ‘ ಎಂದು ನ್ಯಾಯಪೀಠವು, ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ಗೆ ತಿಳಿಸಿತು.

‘ಪ್ರಸ್ತುತ ದೇಶದಲ್ಲಿ ನ್ಯಾಯಾಧೀಶರು ತಮಗೆ ಬೆದರಿಕೆ ಹಾಕುವವರ ವಿರುದ್ಧ ದೂರು ಸಲ್ಲಿಸಲು ಸಾಧ್ಯವಾಗದಂತಹ ವಾತಾವರಣವಿದೆ‘ ಎಂದು ಹೇಳಿದ ನ್ಯಾಯಪೀಠ, ಇಂಥ ಪ್ರಕರಣಗಳಲ್ಲಿ ದೂರು ಸಲ್ಲಿಸಿದರೂ, ಸಿಬಿಐ ಅಥವಾ ಪೊಲೀಸರು ನ್ಯಾಯಾಂಗ ಇಲಾಖೆಗೆ ನೆರವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಾರ್ಖಂಡ್‌ನ ಧನ್‌ಬಾದ್‌ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಉತ್ತಮ್ ಆನಂದ್‌ ಅವರು ಜುಲೈ 28ರಂದು ಬೆಳಿಗ್ಗೆ ಜಾಗಿಂಗ್ ಹೋಗುತ್ತಿದ್ದಾಗ ಆಟೊ ರಿಕ್ಷಾವೊಂದು ಗುದ್ದಿ ಪರಾರಿಯಾಗಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನ್ಯಾಯಾಧೀಶರನ್ನು ದಾರಿಹೋಕರೊಬ್ಬರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.