ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಪ್ರಹಸನದಲ್ಲಿ ಸರ್ಕಾರ ಉಳಿಸಿಕೊಳ್ಳಲಾಗದೇ ಭಾರಿ ಮುಖಭಂಗ ಅನುಭವಿಸಿರುವ ಬಿಜೆಪಿಗೆ ಅಲ್ಲಿ ಈಗ ಮತ್ತೊಂದು ಆಘಾತ ಎದುರಾಗಿದೆ. ಪಕ್ಷದ ಪ್ರಮುಖ ನಾಯಕಿ, ಗೋಪಿನಾಥ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ ಅವರು ಬಿಜೆಪಿ ತೊರೆಯುವ ಮುನ್ಸೂಚನೆ ನೀಡಿದ್ದಾರೆ.
ದೇವೇಂದ್ರ ಫಡಣವೀಸ್ ನೇತೃತ್ವದ ಬಿಜೆಪಿ–ಶಿವಸೇನಾ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅವರು, ಸದ್ಯ ಪರ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ‘ನನ್ನ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಕಾಲ ಬಂದಿದೆ,’ ಎಂದು ಭಾನುವಾರವಷ್ಟೇ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಅವರು, ಇಂದು ಟ್ವಿಟರ್ ಖಾತೆ ಪ್ರೊಫೈಲ್ ಅಪ್ಡೇಟ್ ಮಾಡಿ ಅದರಲ್ಲಿ ಬಿಜೆಪಿಯ ಉಲ್ಲೇಖವನ್ನೇ ತೆಗೆದು ಹಾಕಿದ್ದಾರೆ. ಇದರ ಜತೆಗೆ, ನೂತನ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಅಭಿನಂದಿಸಿ, ಬಾಳಾ ಠಾಕ್ರೆ ಅವರ ಆಶಯಗಳ ಬಗ್ಗೆ ಅವರು ತಮ್ಮ ಟ್ವೀಟ್‌ಗಳಲ್ಲಿ ಮಾತನಾಡಿದ್ದಾರೆ.
ಸದ್ಯ ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಗಿರುವ ಮಹಾರಾಷ್ಟ್ರದಲ್ಲಿ ಪಂಕಜಾ ಮುಂಡೆ ಅವರ ಈ ನಡೆ ಹೊಸ ಅಲೆಗಳನ್ನೇ ಸೃಷ್ಟಿ ಮಾಡಿದೆ.
ಫೇಸ್‌ಬುಕ್‌ನಲ್ಲಿ ಏನು ಬರೆದುಕೊಂಡಿದ್ದರು ಮುಂಡೆ
'ಮಹಾರಾಷ್ಟ್ರದಲ್ಲಿನ ರಾಜಕೀಯ ಸ್ಥಿತ್ಯಂತರಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ದಾರಿಯ ಕುರಿತು ನಿರ್ಧಾರಗಳನ್ನು ಕೈಗೊಳ್ಳುವ ಸಮಯ ಬಂದಿದೆ. ನನ್ನ ನಿರ್ಧಾರಗಳ ಬಗ್ಗೆ ಮಾತನಾಡಲು ನನಗೆ 8–10 ದಿನಗಳ ಸಮಯ ಬೇಕು. ಈ ಸನ್ನಿವೇಶದ ರಾಜಕೀಯದ ಆಧಾರದಲ್ಲಿ ನನ್ನ ಮುಂದಿನ ಹಾದಿಯನ್ನು ನಿರ್ಧರಿಸಿಕೊಳ್ಳಲೇಬೇಕಾಗಿದೆ. ಮುಂದೆ ಏನು ಮಾಡಬೇಕು, ಯಾವ ದಾರಿ ಆಯ್ಕೆ ಮಾಡಿಕೊಳ್ಳಬೇಕು, ಜನರಿಗೆ ನಾವೇನು ಕೊಡಬಹುದು, ನಮ್ಮ ಬಲವೇನು, ಜನರ ನಿರೀಕ್ಷೆಗಳೇನು ಎಂಬುದರ ಬಗ್ಗೆ ಗಂಭೀರವಾಗಿ ಯೋಚಿಸಿ ಡಿ.12ರಂದು ನಿಮ್ಮ ಮುಂದೆ ಬರಲಿದ್ದೇನೆ,’ ಎಂದು ಅವರು ಭಾನುವಾರ ಬರೆದಿದ್ದರು.
ಡಿ.12 ಮಾಜಿ ಸಚಿವ ಗೋಪಿನಾಥ್ ಮುಂಡೆ ಜನ್ಮದಿನಾಚರಣೆಯಾಗಿದ್ದು, ಅಂದು ಬೀದ್ ಜಿಲ್ಲೆಯಯಲ್ಲಿರುವ ಗೋಪಿನಾಥ್ ಮುಂಡೆ ಅವರ ಸ್ಮಾರಕ ಗೋಪಿನಾಥಗಢದಲ್ಲಿ ಪಂಕಜಾ ಬೆಂಬಲಿಗರ ಸಭೆ ಕರೆದಿದ್ದಾರೆ. ಬಹುತೇಕ ಅಲ್ಲಿ ಅವರು ತಮ್ಮ ಮುಂದಿನ ನಡೆಯ ಕುರಿತು ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಹೀಗಾಗಿ ಪಂಕಜಾ ಮುಂಡೆ ಅವರ ನಿರ್ಧಾರದ ಬಗ್ಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮನೆ ಮಾಡಿದ್ದು, ಅದೇ ಹೊತ್ತಲ್ಲೇ ಬಿಜೆಪಿಗೆ ಆತಂಕವನ್ನೂ ಉಂಟು ಮಾಡಿದೆ.
ಪಂಕಜಾ ಮುಂಡೆ ಅವರು ಮಹಾರಾಷ್ಟ್ರದಲ್ಲಿ ‘ಲೋಕನೇತ’ ಎಂದೇ ಪ್ರಖ್ಯಾತರಾಗಿದ್ದ, ಕೇಂದ್ರದ ಮಾಜಿ ಸಚಿವ ಗೋಪಿನಾಥ ಮುಂಡೆ ಅವರ ಪುತ್ರಿ. ಗೋಪಿನಾಥ್ ಅವರು 1995–99ರ ಅವಧಿಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದರು. 2014ರಲ್ಲಿ ಬಿಜೆಪಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಗೋಪಿನಾಥ ಮುಂಡೆ ಅವರು ಮೇ 26ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದರು. ಆದರೆ, ಜೂನ್ 3ರಂದು ನವದೆಹಲಿಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಸಾವಿಗೀಡಾಗಿದ್ದರು.
ಈ ಚುನಾವಣೆಯಲ್ಲಿ ಅವರು ತಮ್ಮ ಸೋದರ ಸಂಬಂಧಿ ಎನ್‌ಸಿಪಿಯ ಧನಂಜಯ ಮುಂಡೆ ಅವರ ಎದುರು ಪರ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಸೋತಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಪಕ್ಷದ ಅಧ್ಯಕ್ಷ ಚಂದ್ರಕಾಂತ ಪಾಟೀಲ್, ‘ಪಂಕಜಾ ಮುಂಡೆ ಅವರು ಪಕ್ಷ ಬಿಡುವ ಕುರಿತ ವರದಿಗಳು ಆಧಾರ ರಹಿತ,’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.