ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ

ಪಿಟಿಐ
Published 20 ಡಿಸೆಂಬರ್ 2018, 11:26 IST
Last Updated 20 ಡಿಸೆಂಬರ್ 2018, 11:26 IST
ರಾಮನಾಥ ಕೋವಿಂದ್
ರಾಮನಾಥ ಕೋವಿಂದ್    

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಮಧ್ಯರಾತ್ರಿಯಿಂದ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿದೆ. ಇದರಿಂದ, ರಾಜ್ಯದ ಆಡಳಿತಕ್ಕೆ ಸಂಬಂಧಿಸಿದ ನೀತಿ ನಿರ್ಧಾರಗಳನ್ನು ಕೈಗೊಳ್ಳಲು ಕೇಂದ್ರ ಸಚಿವ ಸಂಪುಟಕ್ಕೆ ಅನುವು ಮಾಡಿಕೊಟ್ಟಂತಾಗಲಿದೆ.

ರಾಷ್ಟ್ರಪತಿ ಆಳ್ವಿಕೆ ಹೇರುವುದಕ್ಕೆ ಸಂಬಂಧಿಸಿದ ಅಧಿಸೂಚನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಸಹಿ ಹಾಕಿದ್ದಾರೆ. ಮೆಹಬೂಬಾ ಮುಫ್ತಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂತೆಗದುಕೊಂಡ ಬಳಿಕ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿತ್ತು.

ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಂದ ವರದಿಯೊಂದನ್ನು ಪಡೆಯಲಾಗಿದೆ. ಈ ವರದಿ ಮತ್ತು ಇತರ ಮಾಹಿತಿಯನ್ನು ಪರಿಗಣಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಗತ್ಯವೆಂದು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ADVERTISEMENT

‘ಸಂವಿಧಾನದ 356ನೇ ವಿಧಿಯ ಅನ್ವಯ ಜಮ್ಮು ಮತ್ತು ಕಾಶ್ಮೀರದ ಆಡಳಿತಕ್ಕೆ ಸಂಬಂಧಿಸಿದ ಎಲ್ಲ ನಿರ್ಣಯಗಳನ್ನು ಕೈಗೊಳ್ಳುವ ಹೊಣೆ ವಹಿಸಿಕೊಳ್ಳುವಂತೆ ರಾಜ್ಯಪಾಲರಿಗೆ ನಿರ್ದೇಶಿಸುತ್ತಿದ್ದೇನೆ. ರಾಷ್ಟ್ರಪತಿಗಳ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದಲ್ಲಿ ರಾಜ್ಯಪಾಲರು ಕಾರ್ಯನಿರ್ವಹಿಸಬೇಕು’ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಶಿಫಾರಸು ಮಾಡಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ವರದಿಯೊಂದನ್ನು ಕಳುಹಿಸಿದ್ದರು. ನಂತರ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ನಿರ್ಧಾರ ಕೈಗೊಳ್ಳಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿದ್ದ ಬಿಜೆಪಿ ಜೂನ್‌ನಲ್ಲಿಪಿಡಿಪಿಗೆ ನೀಡಿದ್ದ ಬೆಂಬಲ ಹಿಂಪಡೆದುರಾಜ್ಯದ ಆಡಳಿತವನ್ನು ರಾಜ್ಯಪಾಲರ ಕೈಗೆ ಒಪ್ಪಿಸಬೇಕು ಎಂದು ಆಗ್ರಹಿಸಿತ್ತು.ಮೈತ್ರಿಕೂಟದಿಂದ ಬಿಜೆಪಿ ಹೊರನಡೆದ ತಕ್ಷಣವೇಮುಖ್ಯಮಂತ್ರಿ ಸ್ಥಾನಕ್ಕೆ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದರು.ಮೆಹಬೂಬಾ ಅವರ ಆಡಳಿತದಲ್ಲಿ ಮೂಲಭೂತವಾದ ಹೆಚ್ಚಾಗಿದೆ, ಭಯೋತ್ಪಾದನಾ ಚಟುವಟಿಕೆ ತೀವ್ರಗೊಂಡಿದೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕಾರಣಕ್ಕೆ ಸರ್ಕಾರದಿಂದ ಹೊರನಡೆದಿರುವುದಾಗಿ ಬಿಜೆಪಿ ಹೇಳಿತ್ತು.

‘ಕೊಳೆತ ಆಲೂಗಡ್ಡೆಯಂತೆ’
ಜಮ್ಮು (ಪಿಟಿಐ):
‘ಸಮಾಜದಲ್ಲಿ ಶ್ರೀಮಂತ ವರ್ಗಕ್ಕೆ ಸೇರಿದ ಕೆಲವರಿಗೆ ಯಾವುದೇ ಸಂವೇದನೆ ಇಲ್ಲ ಮತ್ತು ಅವರು ದಾನಧರ್ಮವನ್ನೂ ಮಾಡುವುದಿಲ್ಲ. ಅಂತಹವರು ಮನುಷ್ಯರಲ್ಲ, ಕೊಳೆತ ಆಲೂಗಡ್ಡೆಗಳಿದ್ದಂತೆ’ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್‌ ಹೇಳಿದ್ದಾರೆ.

‘ತಮ್ಮ ಪುತ್ರಿಯ ವಿವಾಹಕ್ಕೆ ₹ 700 ಕೋಟಿ ವ್ಯಯಿಸಿದ ನೀವು ಯಾವುದಾದರೂ ಧರ್ಮಕಾರ್ಯಗಳನ್ನು ನಡೆಸುತ್ತಿರುವಿರಾ ಎಂದು ಪತ್ರಕರ್ತರೊಬ್ಬರು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯನ್ನ ಪ್ರಶ್ನಿಸಿದರು. ಆಗ ಅವರು, ನಾನು ದಾನಧರ್ಮ ಮಾಡುವುದಿಲ್ಲ. ಆದರೆ, ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದೇನೆ ಎಂದು ಉತ್ತರಿಸಿದರು’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಕಾರ್ಯಕ್ರಮವೊಂದರಲ್ಲಿ ಮಲಿಕ್‌ ಜರಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.