ADVERTISEMENT

ನಾಯಕ, ಖಳನಾಯಕ ಎರಡೂ ಆಗಿದ್ದ ಮುಷರಫ್‌: ಪಾಕ್‌ ಪತ್ರಿಕೆ

ಪಿಟಿಐ
Published 6 ಫೆಬ್ರುವರಿ 2023, 14:39 IST
Last Updated 6 ಫೆಬ್ರುವರಿ 2023, 14:39 IST
ಪರ್ವೇಜ್‌ ಮುಷರಫ್‌
ಪರ್ವೇಜ್‌ ಮುಷರಫ್‌   

ಇಸ್ಲಾಮಾಬಾದ್‌ : ಭಾನುವಾರ ನಿಧನರಾದ ಪಾಕಿಸ್ತಾನ ದೇಶದ ಮಾಜಿ ಮಿಲಿಟರಿ ಆಡಳಿತಾಧಿಕಾರಿ ಹಾಗೂ ಮಾಜಿ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರಫ್‌ ‌ಅವರ ಕುರಿತು ಅಲ್ಲಿಯ ಪತ್ರಿಕೆಗಳು ಸಂಪಾದಕೀಯ ಲೇಖನದಲ್ಲಿ ವಿವಿಧ ಬಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಮುಷರಫ್‌ ದೋಷಪೂರಿತ ನೀತಿಗಳ ಕುರಿತೂ ಹಲವು ಪತ್ರಿಕೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಕಾರ್ಗಿಲ್‌ ಯುದ್ಧದ ಹೊಣೆಗಾರ ಎಂಬ ಖ್ಯಾತಿಯ ಹೊರತಾಗಿಯೂ ಮುಷರಫ್‌ ‌ಅವರು ಭಾರತದ ಜೊತೆ ಶಾಂತಿ ಪ್ರಕ್ರಿಯೆಗೆ ಶ್ರಮಿಸಿದ್ದರು ಎಂದು ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ಪತ್ರಿಕೆಯು ಸಂಪಾದಕೀಯ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಾಶ್ಮೀರ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಭಾರತ– ಪಾಕಿಸ್ತಾನಗಳ ನಡುವೆ ಎರಡೂ ದೇಶಗಳ ಸಮನ್ವಯ ಸಾಧಿಸುವಲ್ಲಿ ಮುಷರಫ್‌ ಸಾಕಷ್ಟು ಶ್ರಮ ವಹಿಸಿದ್ದರು. 1999ರ ಕಾರ್ಗಿಲ್‌ ಯುದ್ಧದ ಕಾರಣ ಮುಷರಫ್ ಅವರು ‘ನಾಯಕ’ ಮತ್ತು ‘ಖಳನಾಯಕ’ ಎರಡೂ ಆಗುತ್ತಾರೆ ಎಂದು ಲೇಖನದಲ್ಲಿ ಬರೆಯಲಾಗಿದೆ.

ADVERTISEMENT

ಮಿಲಿಟರಿ ಆಡಳಿತಗಾರರಾದ ಆಯುಬ್‌ ಖಾನ್‌ ಮತ್ತು ಜಿಯಾ–ಉಲ್‌–ಹಖ್‌ ಅವರ ಹೆಜ್ಜೆಗಳನ್ನು ಹಿಂಬಾಲಿಸಿದ ಮುಷರಫ್‌, ದೇಶದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಹಠಾತ್ತಾಗಿ ತಡೆ ತಂದ ಕಾರಣಕ್ಕಾಗಿ ನೆನಪಿನಲ್ಲುಳಿಯುತ್ತಾರೆ ಎಂದು ಮತ್ತೊಂದು ಪ್ರಮುಖ ಪತ್ರಿಕೆ ದಿ ಡಾನ್‌ ಸಂಪಾದಕೀಯ ಲೇಖನದಲ್ಲಿ ಬರೆಯಲಾಗಿದೆ.

ಮುಷರಫ್‌ ಎರಡು ಬಾರಿ ಸಂವಿಧಾನವನ್ನು ಉಲ್ಲಂಘಿಸಿದ್ದರು. 2007ರಲ್ಲಿ ಎರಡನೇ ಬಾರಿಗೆ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿ ದೇಶದ್ರೋಹದ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾದ ಪಾಕಿಸ್ತಾನದ ಏಕೈಕ ಅಧ್ಯಕ್ಷ ಎಂಬ ಅಪಕೀರ್ತಿಗೂ ಕಾರಣರಾದರು. ಅವರ ಸರ್ವಾಧಿಕಾರಿ ಆಡಳಿತವು ಉದಾರವಾದಿ ಸುಧಾರಣೆಗಳನ್ನೂ ಒಳಗೊಂಡಿದ್ದ ಒಗಟಿನಂತಿತ್ತು. ಸಾಂವಿಧಾನಿಕ ಪ್ರಕ್ರಿಯೆಗಳು ಹಳಿತಪ್ಪುವಂತೆ ಮಾಡಿದ್ದು ಮುಷರಫ್‌ ಅವರು ಎಸಗಿದ್ದ ತಪ್ಪುಗಳಲ್ಲಿ ಕ್ಷಮಿಸಲು ಸಾಧ್ಯವಾಗದಂಥ ತಪ್ಪು ಎಂದು ಬರೆಯಲಾಗಿದೆ.

‘ಪ್ರಜಾಪ್ರಭುತ್ವದ ಮೇಲೆ ಮುಷರಫ್‌ ಅತ್ಯಂತ ಹೀನ ದಾಳಿ ಎಸಗಿದರು. ಅವರು ದೇಶದ ಆಡಳಿತವನ್ನು ಕ್ಷಿಪ್ರಕ್ರಾಂತಿ ಮೂಲಕ ಕೈಗೆತ್ತಿಕೊಂಡ ಬಳಿಕ ದೇಶದ ಸಂವಿಧಾನವನ್ನು ಎಸೆಯಬಹುದಾದ ಕಾಗದದ ತುಂಡು ಎಂದು ಕರೆದರು. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆ ಆಗಲು 9 ವರ್ಷಗಳು ತಗುಲಿವು. ಅದೂ ಕೂಡ ಮುಷರಫ್‌ ಅವರ ದೋಷಪೂರಿತ ನೀತಿಯ ಹೊಡೆತವನ್ನು ಎದುರಿಸಬೇಕಾಯಿತು’ ಎಂದು ದಿ ನ್ಯೂಸ್‌ ಇಂಟರ್‌ನ್ಯಾಷನಲ್ ಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.