ನವದೆಹಲಿ/ಜೈಪುರ/ಹೈದರಾಬಾದ್:ದೇಶದಾದ್ಯಂತ ಸ್ವಾತಂತ್ರ್ಯೋತ್ಸ ವವನ್ನು ಸೋಮವಾರ ಆಚರಿ ಸುವ ವೇಳೆ ಹಲವು ಮುಖ್ಯಮಂತ್ರಿಗಳು ಹಲವು ಜನಪರ ಘೋಷಣೆಗಳನ್ನು ಮಾಡಿದರು. ಮತ್ತೆ ಕೆಲವು ಮುಖ್ಯಮಂತ್ರಿಗಳು, ಪ್ರಧಾನಿ ಮೋದಿ ಅವರ ‘ಉಚಿತ ಕೊಡುಗೆಗಳ ಸಂಸ್ಕೃತಿ’ ಟೀಕೆಗೆ ಪ್ರತ್ಯುತ್ತರ ನೀಡುವ ವಾಗ್ದಾಳಿಗೆ ಬಳಸಿಕೊಂಡರು.
ಕಲ್ಯಾಣ ಯೋಜನೆಗಳನ್ನು ಉಚಿತ ಕೊಡುಗೆ ಎಂದು ಕರೆಯುವುದು ‘ಅಪಮಾನ ಮಾಡಿದಂತೆ’ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
‘ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ. ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿದೆ. ಅಧಿಕಾರ ಕೇಂದ್ರೀಕರಣ ಮಾಡುತ್ತಿದೆ. ದಿನಬಳಕೆ ವಸ್ತುಗಳಿಗೆ ತೆರಿಗೆ ವಿಧಿಸಿ, ಬಡ ಮತ್ತು ಮಧ್ಯಮ ವರ್ಗದವರ ಬದುಕಿಗೆ ಬರೆ ಎಳೆದಿದೆ’ ಎಂದು ಅವರು ಆರೋಪಿಸಿದರು.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ‘ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವುದು ಪ್ರತಿ ಸರ್ಕಾರದ ಜವಾಬ್ದಾರಿ.ಅಭಿವೃದ್ಧಿಹೊಂದಿರುವ ದೇಶಗಳಲ್ಲಿ ಬಡವರು ಮತ್ತು ವೃದ್ಧರಿಗೆ ವಾರಕ್ಕೊಮ್ಮೆ ಪಿಂಚಣಿ ಪಾವತಿಸಲಾಗುತ್ತಿದೆ. ‘ರೇವ್ಡಿ’ ಸಂಸ್ಕೃತಿ ಟೀಕೆಯನ್ನು ನಾನು ಪರಿಗಣಿಸಲಾರೆ. ರಾಜಸ್ಥಾನದಲ್ಲಿ ಒಂದು ಕೋಟಿ ಜನರಿಗೆ ಪಿಂಚಣಿ ನೀಡಲಾಗುತ್ತಿದೆ’ ಎಂದು ಹೇಳಿದರು.
‘ಉಚಿತ ಯೋಜನೆಗಳಿಂದ ಬಡತನ ನಿರ್ಮೂಲನೆ’
‘ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಉಚಿತ ಕೊಡುಗೆಯಲ್ಲ. ಈ ಎರಡು ಸೌಲಭ್ಯಗಳಿಂದ ದೇಶದ ಬಡತನ ನಿರ್ಮೂಲನೆ ಸಾಧ್ಯ. ಇವು ಜನ ಕಲ್ಯಾಣ ಯೋಜನೆಗಳು’ ಎಂದುದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಲಾ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಉಚಿತವಾಗಿ ಕಲ್ಪಿಸಲು ದೇಶದ ರಾಜಧಾನಿಯಲ್ಲಿ ಸಾಧ್ಯವಾಗಿರುವಾಗ, ಇಡೀ ದೇಶಕ್ಕೆ ಈ ಸೌಲಭ್ಯಗಳನ್ನು ಐದು ವರ್ಷಗಳಲ್ಲಿ ಒದಗಿಸಲು ನೀತಿಗಳನ್ನು ಪರಿಷ್ಕರಿಸಲು ಸಾಧ್ಯವೆಂದು ಅವರು ಪ್ರತಿಪಾದಿಸಿದರು.
**
ನಿರುದ್ಯೋಗ, ಭ್ರಷ್ಟಾಚಾರ ಮತ್ತು ಕೋಮುವಾದದಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿ, ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡಬೇಕು.
–ಭಗವಂತ್ ಮಾನ್,ಪಂಜಾಬ್ ಮುಖ್ಯಮಂತ್ರಿ
*
ಮಹಾತ್ಮಾ ಗಾಂಧಿ ಅವರು ಪ್ರತಿಪಾದಿಸಿದ ಜಾತ್ಯತೀತತೆ ಮತ್ತು ಭ್ರಾತೃತ್ವದ ಆದರ್ಶ ಇಂದು ರಾಷ್ಟ್ರದ ತುರ್ತು ಅಗತ್ಯ.
–ಎಂ.ಕೆ. ಸ್ಟಾಲಿನ್,ತಮಿಳುನಾಡಿನ ಮುಖ್ಯಮಂತ್ರಿ
*
ಮಹಿಳೆಯರು ಅಸುರಕ್ಷಿತವೆಂಬ ಭಾವನೆ ಇರದ, ಜನರನ್ನು ವಿಭಜಿಸುವದಬ್ಬಾಳಿಕೆಯ ಶಕ್ತಿಗಳಿಗೆ ನೆಲೆ ಇರದಂತಹ ರಾಷ್ಟ್ರ ನಿರ್ಮಿಸಲು ಬಯಸುತ್ತೇನೆ. ನಮ್ಮ ಕನಸಿನ ಭಾರತಕ್ಕಾಗಿ ಪ್ರತಿದಿನವೂ ಶ್ರಮಿಸುತ್ತೇನೆ.
–ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳದ ಮುಖ್ಯಮಂತ್ರಿ
*
ದೇಶದ 135 ಕೋಟಿ ಜನರು ಒಂದೇ ಧ್ವನಿಯಲ್ಲಿ ಮತ್ತು ಏಕ ಭಾರತ, ಸರ್ವಶ್ರೇಷ್ಠ ಭಾರತ ಎಂಬ ಪರಿಕಲ್ಪನೆಯೊಂದಿಗೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ.ಪ್ರತಿ ಭಾರತೀಯನೂ ದೇಶದ ಬಗ್ಗೆ ಹೆಮ್ಮೆ ಪಡಬೇಕು.
–ಯೋಗಿ ಆದಿತ್ಯನಾಥ್,ಉತ್ತರ ಪ್ರದೇಶ ಮುಖ್ಯಮಂತ್ರಿ
*
ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ನೀಡಿರುವ 10 ಲಕ್ಷ ಉದ್ಯೋಗಗಳ ಭರವಸೆ ಈಡೇರಿಸಲು ತಮ್ಮ ಸರ್ಕಾರ ಬದ್ಧವಾಗಿದೆ.
–ನಿತೀಶ್ ಕುಮಾರ್,ಬಿಹಾರ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.