ADVERTISEMENT

ಉಪಸಭಾಪತಿ ಚುನಾವಣೆ: ‘ಇಂಡಿಯಾ’ ಕೂಟದ ವಿನೂತನ ತಂತ್ರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:02 IST
Last Updated 29 ಜೂನ್ 2024, 16:02 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಲೋಕಸಭೆಯ ಉಪಸಭಾಪತಿ ಆಯ್ಕೆಯ ವಿಚಾರದಲ್ಲಿ ‘ಇಂಡಿಯಾ’ ಕೂಟವು ವಿನೂತನ ತಂತ್ರದ ಮೊರೆಹೋಗಿದೆ. ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಅವರನ್ನು ‘ಇಂಡಿಯಾ’ ಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಪ್ರಬಲ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಪ್ರಸಾದ್ ಅವರು ಉತ್ತರ ಪ್ರದೇಶದ ಫೈಜಾಬಾದ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಅಯೋಧ್ಯೆ ಬರುತ್ತದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ನಡುವೆಯೂ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಅವರನ್ನು ಪ್ರಸಾದ್ 54,567 ಮತಗಳಿಂದ ಸೋಲಿಸಿದ್ದರು.

ಎನ್‌ಡಿಎ ಉಪಸಭಾಪತಿ ಸ್ಥಾನವನ್ನೂ ತಮ್ಮ ಕೂಟದವರಿಗೇ ಕೊಡಲು ಇಚ್ಛಿಸುತ್ತಿದ್ದು, ವಿರೋಧಿ ಕೂಟಕ್ಕೆ ಬಿಟ್ಟುಕೊಡುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ. ಹೀಗಿರುವಾಗ ದಲಿತ ಸಮುದಾಯಕ್ಕೆ ಸೇರಿದ್ದು, ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದಿರುವ ಅವದೇಶ್ ಪ್ರಸಾದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಬಲವಾದ ಸಂದೇಶ ರವಾನಿಸಲು ‘ಇಂಡಿಯಾ’ ಕೂಟ ಮುಂದಾಗಿದೆ. 

ADVERTISEMENT

ಈ ಸಂಬಂಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎನ್‌ಡಿಎ ಕೂಟದಲ್ಲಿ 293 ಸಂಸದರಿದ್ದರೆ, ‘ಇಂಡಿಯಾ’ ಕೂಟದಲ್ಲಿ 236 ಸಂಸದರಿದ್ದಾರೆ. ಉಳಿದಂತೆ ಆರು ಪಕ್ಷಗಳಿಗೆ ಸೇರಿದ 9 ಸಂಸದರು ಯಾವ ಕೂಟಕ್ಕೂ ಸೇರಿಲ್ಲ. ಉಪಸಭಾಪತಿ ಚುನಾವಣೆಯನ್ನು ಆದಷ್ಟು ಬೇಗ ನಡೆಸುವಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆಯಲು ‘ಇಂಡಿಯಾ’ ಕೂಟ ತೀರ್ಮಾನಿಸಿದೆ.

17ನೇ ಲೋಕಸಭೆಯ ಉದ್ದಕ್ಕೂ ಡೆಪ್ಯುಟಿ ಸ್ಪೀಕರ್ ಕುರ್ಚಿ ಖಾಲಿಯಾಗಿಯೇ ಇತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.