ADVERTISEMENT

ಕಾಶ್ಮೀರ | ಹತ್ಯೆಯಾದ ಉಗ್ರನ ಬಳಿ ಸ್ಟೇಯರ್ ಎಯುಜಿ ರೈಫಲ್‌: ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 14:28 IST
Last Updated 20 ಜುಲೈ 2024, 14:28 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಶ್ರೀನಗರ: ಕಾಶ್ಮೀರದ ಕುಪ್ವಾಡ ಜಿಲ್ಲೆಯಲ್ಲಿ ಇತ್ತೀಚೆಗೆ ಹತ್ಯೆಯಾದ ಭಯೋತ್ಪಾದಕನ ಬಳಿಯಿದ್ದ, ಆಸ್ಟ್ರೇಲಿಯಾದಲ್ಲಿ ನಿರ್ಮಾಣವಾದ ಸ್ಟೇಯರ್ ಎಯುಜಿ ರೈಫಲ್‌ ಅನ್ನು ಭದ್ರತಾ ಸಿಬ್ಬಂದಿ ‌ವಶಕ್ಕೆ ಪಡೆದಿದ್ದಾರೆ. ಈ ಕುರಿತ ಪ್ರಾಥಮಿಕ ತನಿಖೆಯಲ್ಲಿ ಶಸ್ತ್ರಾಸ್ತ್ರವು ಆಫ್ಗಾನಿಸ್ತಾನ ಮೂಲಕ ಬಂದಿದೆ ಎಂದು ಗೊತ್ತಾಗಿದೆ. ಈ ಬೆಳವಣಿಗೆಯು ಆತಂಕ ಮೂಡಿಸಿದೆ. 

ಜುಲೈ 18ರಂದು ನಡೆದಿದ್ದ ದಾಳಿಯಲ್ಲಿ ಇಬ್ಬರು ವಿದೇಶಿ ಉಗ್ರರು ಹತರಾಗಿದ್ದರು. ಕೆರನ್‌ನಲ್ಲಿ ಗಡಿ ನಿಯಂತ್ರಣ ರೇಖೆಯ ಸಮಿತಿ ದಾಳಿ ನಡೆದಿತ್ತು. ಸ್ಟೇಯರ್ ಎಯುಜಿ ರೈಫಲ್‌ ಪತ್ತೆಯಾಗಿರುವುದು ಕಾಶ್ಮೀರ ಇತಿಹಾಸದಲ್ಲೇ ಇದೇ ಮೊದಲು.

ADVERTISEMENT

ಆಸ್ಟ್ರೇಲಿಯಾದ ರಕ್ಷಣಾ ಪಡೆಗಳು (ಎಡಿಎಫ್‌) ಅಫ್ಗಾನಿಸ್ತಾನದಲ್ಲಿ ನಡೆದಿದ್ದ ನ್ಯಾಟೊ ನೇತೃತ್ವದ ವಿವಿಧ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದವು. 2021ರ ಆಗಸ್ಟ್‌ನಲ್ಲಿ ಕಾಬೂಲ್‌ನಿಂದ ಸೇನೆಯನ್ನು ಹಿಂದೆ ಕರೆಸಿಕೊಂಡಾಗ, ಶಸ್ತ್ರಾಸ್ತ್ರಗಳು ಉಗ್ರರ ತಂಡ ಸೇರಿರಬಹುದು ಎನ್ನಲಾಗಿದೆ.

ಭದ್ರತಾ ಪಡೆಗಳು ಆಸ್ಟ್ರೇಲಿಯಾ ನಿರ್ಮಾಣದ ರೈಫಲ್‌, ಜಮ್ಮು ಮತ್ತು ಕಾಶ್ಮೀರ‌ ವಲಯ ತಲುಪಿದ್ದಾದರೂ ಹೇಗೆ ಎನ್ನುವುದರ ಪತ್ತೆಗೆ ಮುಂದಾಗಿವೆ.

ಕಳೆದ ವರ್ಷ ಅಮೆರಿಕ ನಿರ್ಮಾಣದ ಎಂ4 ಕಾರ್ಬೈನ್ ರೈಫಲ್‌ ಪತ್ತೆಯಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಈಗ ಸ್ಟೇಯರ್ ಎಯುಜಿ ಪತ್ತೆಯಾಗಿದೆ. ಇಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹೇಗೆ ಈ ವಲಯಕ್ಕೆ ಬಂದವು ಎನ್ನುವುದು ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.