ಭೋಪಾಲ್: ಮುಂಬರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ನಂತರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜ್ಯದ ಜನರು ವಿದಾಯ ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕ ಕಮಲ್ ನಾಥ್ ಹೇಳಿದ್ದಾರೆ.
ಸಾಗರ ಜಿಲ್ಲೆಯ ರೆಹ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಮಲ್‌ನಾಥ್, ‘ಹಣ, ಪೊಲೀಸ್ ಮತ್ತು ಅಧಿಕಾರದಿಂದ ನಡೆಯುತ್ತಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇನ್ನೂ ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿದೆ. ವಿಧಾನಸಭೆ ಚುನಾವಣೆಯ ನಂತರ ಮಧ್ಯಪ್ರದೇಶದ ಜನರು ಚೌಹಾಣ್ ಅವರಿಗೆ ಬೀಳ್ಕೊಡುಗೆ ನೀಡಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ಶಿವರಾಜ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡ ನಂತರ ನಿರುದ್ಯೋಗಿಯಾಗುವುದಿಲ್ಲ. ಏಕೆಂದರೆ, ಅವರು ಉತ್ತಮ ನಟ. ಅವರು ನಟನಾ ಪ್ರವೃತ್ತಿಯನ್ನು ಮುಂದುವರಿಸಲು ಮುಂಬೈಗೆ ತೆರಳುತ್ತಾರೆ ಮತ್ತು ಮಧ್ಯಪ್ರದೇಶಕ್ಕೆ ಕೀರ್ತಿಯನ್ನು ತರುತ್ತಾರೆ’ ಎಂದು ನಾಥ್ ಟೀಕಿಸಿದ್ದಾರೆ.
‘ಸಿಎಂ ಚೌಹಾಣ್ ಅವರು ರಾಜ್ಯದ ಯುವಕರಿಗೆ ಒಂದು ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ, ಕೊನೆಯದಾಗಿ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನಾದರೂ ಅವರು ಭರ್ತಿ ಮಾಡಬೇಕಿತ್ತು. ಕಳೆದ 18 ವರ್ಷಗಳಿಂದ ಬಿಜೆಪಿಯು ರಾಜ್ಯವನ್ನು ಹಾಳು ಮಾಡಿದೆ. ಮುಂಬರುವ ಚುನಾವಣೆಯು ಮಧ್ಯಪ್ರದೇಶದ ಭವಿಷ್ಯಕ್ಕಾಗಿ ನಡೆಯುತ್ತದೆಯೇ ಹೊರತು, ಯಾವುದೇ ಅಭ್ಯರ್ಥಿಯದ್ದರಾಗಿರುವುದಿಲ್ಲ’ ಎಂದು ಕಮಲ್ ನಾಥ್ ವಾಗ್ದಾಳಿ ನಡೆಸಿದರು.
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯು ನವೆಂಬರ್ 17ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.