ಚೆನ್ನೈ: ಶುಕ್ರವಾರ ರಾತ್ರಿ ತಮಿಳುನಾಡಿನ ತಿರುಚ್ಚಿಯಿಂದ ಶಾರ್ಜಾಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ತಾಂತ್ರಿಕ ದೋಷದಿಂದಾಗಿ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
141 ಮಂದಿ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಟೆಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಹೈಡ್ರಾಲಿಕ್ ವೈಫಲ್ಯ ಕಾಣಿಸಿಕೊಂಡಿತು. ಸುಮಾರು ಎರಡೂವರೆ ತಾಸು ಆಕಾಶದಲ್ಲೇ ಸುತ್ತಿದ ವಿಮಾನ ಕೊನೆಗೂ ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಪೈಲಟ್ ಯಶಸ್ವಿಯಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ಶುಕ್ರವಾರ ಸಂಜೆ ಆರು ಗಂಟೆ ಹೊತ್ತಿಗೆ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ತ್ವರಿತ ರಕ್ಷಣಾ ಕಾರ್ಯಾಚರಣೆಗಾಗಿ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ತಿಳಿಸಿದ್ದಾರೆ.
ಹೈಡ್ರಾಲಿಕ್ ವೈಫಲ್ಯದ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ. ಪ್ರಯಾಣಿಕರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಲು ಸೂಚನೆ ನೀಡಲಾಗಿದೆ ಎಂದು ಅವರ ಕಚೇರಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.