ADVERTISEMENT

ಶೋಪಿಯಾನ್‌ ಜಿಲ್ಲೆ: ಅಂದು ಉಗ್ರ ಚಟುವಟಿಕೆ ಕಣ-ಇಂದು ಮಾದಕವಸ್ತು ಮಾರಾಟದ ತಾಣ

ಶೋಪಿಯಾನ್‌ ಜಿಲ್ಲೆಯಲ್ಲಿ ಹೆಚ್ಚಿದ ಮಾದಕ ವ್ಯಸನಿಗಳ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 15:14 IST
Last Updated 14 ಫೆಬ್ರುವರಿ 2022, 15:14 IST
   

ಶ್ರೀನಗರ: ಉಗ್ರರ ಚಟುವಟಿಕೆಯ ಪ್ರಮುಖ ನೆಲೆಯಾಗಿದ್ದ ಶೋಪಿಯಾನ್‌ ಜಿಲ್ಲೆ ಈಗ ಮಾದಕ ವಸ್ತುಗಳ ಕೇಂದ್ರಬಿಂದುವಾಗಿದ್ದು, ಇಲ್ಲಿನ ಯುವ ಸಮೂಹ ಹೆಚ್ಚು ಹೆರಾಯಿನ್‌ ಸೇವನೆ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

‘ಶೋಪಿಯಾನ್‌ ಸರ್ಕಾರಿ ಜಿಲ್ಲಾಸ್ಪತ್ರೆಯ ವ್ಯಸನ ಚಿಕಿತ್ಸಾ ಕೇಂದ್ರದಲ್ಲಿ 2021ರ ಡಿಸೆಂಬರ್‌ನಿಂದ ಈವರೆಗೆ 24 ಜನರು ದಾಖಲಾಗಿದ್ದು, ಎಲ್ಲರೂ 17–24 ವಯೋಮಾನದವರು. ಈ ಪೈಕಿ 23 ಯುವಕರು ಹೆರಾಯಿನ್‌ ತೆಗೆದುಕೊಳ್ಳುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆದಿಲ್‌ ಫಾರೂಕ್‌ ತಿಳಿಸಿದರು.

‘ದುಶ್ಚಟಕ್ಕೆ ಒಳಗಾದವರಿಗೆ ವ್ಯಸನಿಗಳಿಗೆ ಚಿಕಿತ್ಸೆ ನೀಡಿದ ನಂತರವೂ ನೋವು ಸಹಿಸಲಾರದೇ ಎಲ್ಲರೂ ಹಾರ್ಡ್‌ ಡ್ರಗ್ಸ್‌ ಆದ ಹೆರಾಯಿನ್‌ ತೆಗೆದುಕೊಳ್ಳಲು ಆರಂಭಿಸಿರುವುದು ಆತಂಕಕಾರಿಯಾಗಿದೆ’ ಎಂದು ಅವರು ಹೇಳಿದರು.

ADVERTISEMENT

‘ಮಾದಕ ವಸ್ತುವಿನ ದುಶ್ಚಟಕ್ಕೆ ಯುವಕರಷ್ಟೆ ಅಲ್ಲ ಯುವತಿಯರೂ ಒಳಗಾಗಿದ್ದಾರೆ. ಶೋಪಿಯಾನ್‌ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯದಿದ್ದರೆ ಯುವ ಸಮೂಹ ನಾಶವಾಗುತ್ತದೆ. ಈ ದುಶ್ಚಟಕ್ಕೆ ಒಳಗಾಗಿ ನಾಲ್ವರು ಮೃತಪಟ್ಟಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಮಾಗ್ರೆ ಮನ್ಸೂರು ಹೇಳಿದರು.

‘ಹವಾಲಾ ಹಣ ಪೂರೈಕೆ ಬಂದ್‌ ಆದ ನಂತರ ಕಾಶ್ಮೀರ ಕಣಿವೆಯತ್ತ ಪಾಕಿಸ್ತಾನದ ಉಗ್ರರು ಹೆರಾಯಿನ್‌ ಸಾಗಿಸಲು ಮುಂದಾಗಿದ್ದಾರೆ. ಸೇಬು ಬೆಳೆ ಆರ್ಥಿಕತೆಯಿಂದ ಇಲ್ಲಿನ ಜನರು ಸ್ಥಿತಿವಂತವಾಗಿದ್ದಾರೆ. ಈ ಸ್ಥಿತಿವಂತ ವರ್ಗದ ಯುವಕರನ್ನು ಸೆಳೆದು ಮಾದಕ ವಸ್ತುವಿನ ವ್ಯಸನಿಗಳಾಗಿ ಮಾಡಿ ನಂತರ ಉಗ್ರ ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘2019ರಲ್ಲಿ ಉಗ್ರ ಸ್ನೇಹಿತನೊಬ್ಬ ನನಗೆ ಹೆರಾಯನ್‌ ಪರಿಚಯಿಸಿದ. ಆತ ನನ್ನನ್ನು ಹೆರಾಯಿನ್‌ ವ್ಯಸನಿಯನ್ನಾಗಿಯಷ್ಟೇ ಮಾಡಲಿಲ್ಲ.ಮಾದಕ ವಸ್ತು ಪೂರೈಕೆದಾರನಾಗಿ ಮಾಡಿದ್ದ’ ಎಂದು ಶೋಪಿಯಾನ್‌ ಜಿಲ್ಲಾ ವ್ಯಸನ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಹೀದ್ ದಾರ್ (ಹೆಸರು ಬದಲಿಸಲಾಗಿದೆ) ಹೇಳಿದರು.

‘ಆತ ಒಂದು ದಿನ ಒಂದು ಕೆ.ಜಿ ಹೆರಾಯನ್‌ ಪಾಕೆಟ್‌ ಕೊಟ್ಟಿದ್ದ. ಅದನ್ನು ನಾನು ಶ್ರೀನಗರಕ್ಕೆ ತಲುಪಿಸಿದೆ. ಆ ಹೆರಾಯಿನ್‌ ಪಾಕೆಟ್‌ ಅನ್ನು ಯಶಸ್ವಿಯಾಗಿ ತಲುಪಿಸಿದ್ದಕ್ಕಾಗಿ ₹ 18 ಲಕ್ಷ ನೀಡಲಾಗಿತ್ತು. ಅದನ್ನು ಉಗ್ರ ಸ್ನೇಹಿತನಿಗೆ ತಲುಪಿಸಿದೆ. ಅದಕ್ಕಾಗಿ ನನಗೆ ₹ 2 ಲಕ್ಷ ಕೊಟ್ಟ. ನಂತರ ಉಗ್ರ ಸ್ನೇಹಿತನನ್ನು ಭದ್ರತಾ ಪಡೆಗಳು ಕೊಂದವು. ಹಣವನ್ನು ವಶಪಡಿಸಿಕೊಂಡವು. ಆ ಪ್ಯಾಕ್‌ನ ಮೇಲೆ ‘ಇದು ಮುಸ್ಲಿಮರಿಗೆ ಅಲ್ಲ. ದೇವರನ್ನು ನಂಬದ ಇರುವವರಿಗೆ ಕೊಡಿ’ ಎಂದು ಪ್ಯಾಕ್‌ನ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆದಿತ್ತು’ ಎಂದು ಅವರು ಹೇಳಿದರು.

‘ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ದೇಶಕ್ಕೆ ನುಸುಳುವ ಪಾಕಿಸ್ತಾನದ ಭಯೋತ್ಪಾದಕರಿಗೆ ಪಾಕ್‌ ಬೇಹುಗಾರಿಕೆ ಸಂಸ್ಥೆಯು ಒಂದು ಕೆಜಿ ಹೆರಾಯಿನ್‌ ಕೊಟ್ಟು ಕಳುಹಿಸಲಾಗುತ್ತಿದೆ. ಅದನ್ನು ಪಾಕ್‌ ಉಗ್ರರು ತಮ್ಮ ಸ್ಥಳೀಯ ಸಂಪರ್ಕಿತರ ಮೂಲಕ ಮಾರಾಟ ಮಾಡುತ್ತಾರೆ. ಅದರಿಂದ ಬರುವ ಹಣವು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ’ ಎಂದು ಶಹೀದ್‌ ದಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.