ADVERTISEMENT

ಫಾರೂಕಿ ಕಾರ್ಯಕ್ರಮ ರದ್ದಾದ ಬೆನ್ನಲ್ಲೇ ಕುನಾಲ್‌ ಕಾಮ್ರಾ ಬೆಂಗಳೂರು ಶೋಗೆ ತಡೆ

ಪಿಟಿಐ
Published 1 ಡಿಸೆಂಬರ್ 2021, 16:13 IST
Last Updated 1 ಡಿಸೆಂಬರ್ 2021, 16:13 IST
ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಕುನಾಲ್‌ ಕಾಮ್ರಾ
ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಕುನಾಲ್‌ ಕಾಮ್ರಾ   

ಬೆಂಗಳೂರು: ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಮುನವ್ವರ್‌ ಫಾರೂಕಿ ಅವರ ಹಾಸ್ಯ ಕಾರ್ಯಕ್ರಮವು ರದ್ದಾದ ಕೆಲವು ದಿನಗಳ ಬೆನ್ನಲ್ಲೇ, ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕುನಾಲ್‌ ಕಾಮ್ರಾ ಅವರ ಹಾಸ್ಯ ಕಾರ್ಯಕ್ರಮಕ್ಕೂ ತಡೆ ಬಿದ್ದಿದೆ.

ಕಾಮ್ರಾ ಅವರ ಹಾಸ್ಯ ಕಾರ್ಯಕ್ರಮದ ಆಯೋಜಕರಿಗೆ ಬೆದರಿಕೆಗಳು ಬಂದ ಹಿನ್ನಲೆ ಶೋ ರದ್ದು ಪಡಿಸಲಾಗಿದೆ.

ಕಾಮಿಡಿ ಶೋ ರದ್ದುಗೊಳಿಸಿರುವ ವಿಚಾರವನ್ನು ಕುನಾಲ್‌ ಕಾಮ್ರಾ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. 'ಎರಡು ಕಾರಣಗಳಿಗೆ ಹಾಸ್ಯ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಮೊದಲನೆಯ ಕಾರಣ, 45 ಮಂದಿಗೆ ಭಾಗವಹಿಸಲು ವಿಶೇಷ ಅನುಮತಿಯನ್ನು ನಿರಾಕರಿಸಲಾಯಿತು. ಎರಡನೇ ಕಾರಣ ಕಾರ್ಯಕ್ರಮಕ್ಕೆ ಬಂದ ಬೆದರಿಕೆಗಳು. ಇದು ಕೋವಿಡ್‌ ತಡೆ ಹಿನ್ನೆಲೆ ನಿರ್ಬಂಧಗಳೆಂದು ಭಾವಿಸುತ್ತೇನೆ. ಬಹುಷಃ ನಾನು ಸೋಂಕಿನ ರೂಪಾಂತರ ಎಂದು ತಿಳಿದುಕೊಂಡಿರಬೇಕು' ಎಂದು ಕುನಾಲ್‌ ಕಾಮ್ರಾ ಮಾರ್ಮಿಕವಾಗಿ ಬರೆದಿದ್ದಾರೆ.

ADVERTISEMENT

ನಡೆಯಬೇಕಿದ್ದ ಕಾರ್ಯಕ್ರಮವನ್ನು ಹೇಗೆ ರದ್ದು ಪಡಿಸಬಹುದು? ಎಂಬುದನ್ನು 5 ಹಂತಗಳಲ್ಲಿ ವಿವರಿಸಿರುವ ಕಾಮ್ರಾ, ಈ ವಿಧಾನಗಳನ್ನು ಅನುಸರಿಸಿದ ಬಳಿಕ ಕಾರ್ಯಕ್ರಮ ರದ್ದಾಗದಿದ್ದರೆ ನಾನು ಹಾಸ್ಯ ಮಾಡುವುದನ್ನೇ ನಿಲ್ಲಿಸುತ್ತೇನೆ ಎಂದಿದ್ದಾರೆ.

'ಮೊದಲ ಹಂತ - ಹಿಂಸೆ ಸಂಭವಿಸುವ ಸಾಧ್ಯತೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ
2ನೇ ಹಂತ - ಕಾರ್ಯಕ್ರಮದ ಆಯೋಜಕರಿಗೆ ಹಿಂಸೆ ಸಂಭವಿಸುವ ಬಗ್ಗೆ ಮಾಹಿತಿ ನೀಡಿ
3ನೇ ಹಂತ - ಕಲಾವಿದನಿಗೆ ಆತ/ಆಕೆ/ಅವರು ಬಂದರೆ ಖಂಡಿತವಾಗಿಯೂ ಹಿಂಸೆ ಸಂಭವಿಸುತ್ತದೆ ಎಂದು ಮಾಹಿತಿ ನೀಡಿ.
4ನೇ ಹಂತ - ಆದಾಗ್ಯೂ ಕಲಾವಿದ ಹೊಂದಿಕೊಂಡರೆ ಕಾರ್ಯಕ್ರಮ ನಡೆಯಬಹುದು ಎಂದು ಆಯೋಜಕರಿಗೆ ನೆನಪಿಸಿ.
5ನೇ ಹಂತ - ನಿಮ್ಮ ಜಯದ ಭಾಗವಾಗಿ ಮೀಮ್‌ಗಳ ಮೂಲಕ ಸಂಭ್ರಮಿಸಲು ಸಿದ್ಧರಾಗಿರಿ.

ಈ ಕಾರ್ಯತಂತ್ರವನ್ನು ನಿಮಗಾಗದ ಯಾವುದೇ ಕಲಾವಿದನ ವಿರುದ್ಧವೂ ಪ್ರಯೋಗಿಸಬಹುದು.' ಎಂದು ಕುನಾಲ್‌ ತನ್ನ ಪೋಸ್ಟ್‌ನಲ್ಲಿ ಕಾರ್ಯಕ್ರಮವನ್ನು ರದ್ದು ಪಡಿಸಲು ಪ್ರಯತ್ನಿಸಿದವರನ್ನು ಟೀಕಿಸಿದ್ದಾರೆ.

ಪ್ರಸಿದ್ಧ ಸ್ಟ್ಯಾಂಡ್‌ ಅಪ್‌ ಕಮಿಡಿಯನ್‌ ವೀರ್‌ ದಾಸ್‌ ಅವರು ಕೂಡ ಇತ್ತೀಚೆಗೆ ಹಿಂದುತ್ವವಾದಿಗಳ ವಿರೋಧ ಎದುರಿಸಿದ್ದರು. ಅವರು ಅಮೆರಿಕದಲ್ಲಿ ನೀಡಿದ ಕಾರ್ಯಕ್ರಮದಲ್ಲಿ ‘ಎರಡು ರೀತಿಯ ಭಾರತ’ಗಳ ಅಸ್ತಿತ್ವದ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.