ಲಖನೌ: ‘ಕನ್ವರ್ ಯಾತ್ರೆ ಮಾರ್ಗದಲ್ಲಿನ’ ತಿಂಡಿ–ತಿನಿಸುಗಳ ಮಳಿಗೆಗಳ ಮಾಲೀಕರು ತಮ್ಮ ಹೆಸರನ್ನು ಮಳಿಗೆಗಳ ಮುಂದೆ ಉಲ್ಲೇಖಿಸಬೇಕು ಎಂಬ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ರಾಜ್ಯದಾದ್ಯಂತ ಶುಕ್ರವಾರ ವಿಸ್ತರಿಸಿದೆ.
‘ಇದಕ್ಕೆ ಸಂಬಂಧಿಸಿದಂತೆ ಆದೇಶವನ್ನು ಸರ್ಕಾರ ಶೀಘ್ರವೇ ಹೊರಡಿಸುವ ಸಾಧ್ಯತೆ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೋಮು ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲಾಗುವ ಮುಜಫ್ಫರ್‌ನಗರ
ಜಿಲ್ಲೆಗೆ ಅನ್ವಯವಾಗುವಂತೆ, ರಾಜ್ಯ ಸರ್ಕಾರ ಸೋಮವಾರ ಈ ವಿವಾದಾತ್ಮಕ ಆದೇಶವನ್ನು ಹೊರಡಿಸಿತ್ತು.
ಈ ಆದೇಶಕ್ಕೆ ವಿರೋಧ ಪಕ್ಷಗಳ ಹಾಗೂ ಆಡಳಿತಾರೂಢ ಮೈತ್ರಿಕೂಟದ ಅಂಗಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಆದೇಶ ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸಿ ಹೊರಡಿಸಲಾಗಿದೆ ಎಂದು ಹೇಳಿದ್ದರು.
ಸಮರ್ಥನೆ: ರಾಜ್ಯ ಸರ್ಕಾರದ ಈ ನಡೆಯನ್ನು ತೂಕ ಮತ್ತು ಅಳತೆ ಇಲಾಖೆಯ ಪ್ರಭಾರ ಮುಖ್ಯಸ್ಥ ವಿ.ಕೆ.ಮಿಶ್ರಾ ಅವರು ಸಮರ್ಥಿಸಿಕೊಂಡಿದ್ದಾರೆ.
‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006ರ ಪ್ರಕಾರ, ಪ್ರತಿಯೊಂದು ರೆಸ್ಟೊರೆಂಟ್ ಮತ್ತು ಧಾಬಾ ‘ಸಂಚಾಲಕ’ (ಈ ತಿಂಡಿ–ತಿನಿಸುಗಳ ಮಳಿಗೆಯ ಉಸ್ತುವಾರಿ) ತನ್ನ ಮಳಿಗೆ ಹೆಸರು, ಮಾಲೀಕರ ಹೆಸರು ಹಾಗೂ ಪರವಾನಗಿ ಸಂಖ್ಯೆಯನ್ನು ಪ್ರದರ್ಶಿಸಬೇಕು’ ಎಂದು ಹೇಳಿದ್ದಾರೆ.
ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷಗಳು ಟೀಕಿಸಿವೆ. ಆದರೆ, ಬಿಜೆಪಿ ಈ ಆದೇಶವನ್ನು ಸಮರ್ಥಿಸಿಕೊಂಡಿದೆ.
‘ಕಾಂವಡ್ ಯಾತ್ರೆ ಕೈಗೊಂಡವರಿಗೆ, ಸಸ್ಯಾಹಾರ ಸಿಗುವ ರೆಸ್ಟೊರೆಂಟ್‌ಗಳನ್ನು ಹುಡುಕಲು ಇದರಿಂದ ಅನುಕೂಲವಾಗಲಿದೆ’ ಎಂದು ಬಿಜೆಪಿ ಹೇಳಿದೆ.
ಆದರೆ, ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ‘ಈ ಆದೇಶವು ಅಸ್ಪೃಶ್ಯತೆಯನ್ನು ಉತ್ತೇಜಿಸುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಾತಿ ಮತ್ತು ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಯಾವುದೇ ನಡೆಯನ್ನು ನಾನು ಬೆಂಬಲಿಸುವುದಿಲ್ಲ–ಚಿರಾಗ್ ಪಾಸ್ವಾನ್ ಎಲ್‌ಜಿಪಿ ನಾಯಕ ಹಾಗೂ ಕೇಂದ್ರ ಸಚಿವ
ಕೋಮು ಸಂಘರ್ಷಕ್ಕೆ ಕಾರಣವಾಗಬಹುದಾದ ಇಂತಹ ಆದೇಶವನ್ನು ಮುಜಫ್ಫರನಗರ ಪೊಲೀಸರು ಹಿಂಪಡೆಯಬೇಕಿತ್ತು. ಧರ್ಮ ಜಾತಿ ಆಧಾರದಲ್ಲಿ ತಾರತಮ್ಯ ಸರಿಯಲ್ಲ–ಕೆ.ಸಿ.ತ್ಯಾಗಿ ಜೆಡಿಯು ಹಿರಿಯ ಮುಖಂಡ
ಮುಜಫ್ಫರನಗರ ಪೊಲೀಸರ ಈ ನಡೆ ದಕ್ಷಿಣ ಆಫ್ರಿಕಾದಲ್ಲಿ ಜಾರಿಯಲ್ಲಿದ್ದ ವರ್ಣಭೇದ ನೀತಿ ಯಹೂದಿಗಳೊಂದಿಗೆ ವ್ಯಾಪಾರ ಮಾಡದಂತೆ ಹಿಟ್ಲರ್ ಹೊರಡಿಸಿದ್ದ ಆದೇಶದಂತಿದೆ–ಅಸಾದುದ್ದೀನ್ ಒವೈಸಿ ಎಐಎಂಐಎಂ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.