ನವದೆಹಲಿ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭೇಟಿಯಾಗಿ ರಾಜಕೀಯ ಸ್ಥಿತಿಗತಿಗಳನ್ನು ಚರ್ಚಿಸಿದ್ದಾರೆ. ಶಿವಸೇನಾ ಸಂಸದ ಸಂಜಯ್ ರಾವುತ್ ಶರದ್ ಪವಾರ್ ಅವರನ್ನು ಭೇಟಿಯಾದ ಬಳಿಕ ಆದಷ್ಟು ಬೇಗ ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪವಾರ್ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಸಿಪಿ ಮುಖ್ಯಸ್ಥರು ರಾಜ್ಯ ನಾಯಕರ ನಿಯೋಗವನ್ನು ಮುನ್ನಡೆಸಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಹಾರಾಷ್ಟ್ರದ ಅಕಾಲಿಕ ಮಳೆಯಿಂದಾಗಿ ಕೃಷಿಗೆ ಎದುರಾಗಿರುವ ತೊಂದರೆ ಬಗ್ಗೆ ವಿವರಿಸಬೇಕು ಎಂದು ಹೇಳಿದರು.
ಪವಾರ್ ಅವರು ಕೇಂದ್ರದ ಕೃಷಿ ಸಚಿವರಾಗಿದ್ದವರು ಮತ್ತು ಹಿರಿಯ ನಾಯಕರು, ಹೀಗಾಗಿ ನಾಯಕರ ನಿಯೋಗವನ್ನು ಕರೆದೊಯ್ದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಅವರಿಗೆ ದೇಶದ ರೈತರ ಸಂಕಷ್ಟಗಳನ್ನು ತಿಳಿಸಿ ಹೇಳಬೇಕು ಎಂದರು.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯವು ಅತ್ಯಂತ ಶೀಘ್ರದಲ್ಲೇ ಶಿವಸೇನಾ ನೇತೃತ್ವದ ಸರ್ಕಾರವನ್ನು ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಪವಾರ್ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸುಮಾರು 50 ನಿಮಿಷಗಳ ಕಾಲ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಮತ್ತು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿಲ್ಲ. ಆದರೆ ಸದ್ಯದ ರಾಜಕೀಯ ಪರಿಸ್ಥಿತಿ ಮತ್ತು ರಾಜಕೀಯ ಎದುರಾಳಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.