ADVERTISEMENT

ಭಾರತದಲ್ಲಿ ₹7.11 ಲಕ್ಷ ಕೋಟಿ ಹೂಡಿಕೆಗೆ ಅವಕಾಶ– ಸೌದಿ ದೊರೆ ಸಲ್ಮಾನ್‌

ಏಜೆನ್ಸೀಸ್
Published 20 ಫೆಬ್ರುವರಿ 2019, 11:56 IST
Last Updated 20 ಫೆಬ್ರುವರಿ 2019, 11:56 IST
   

ನವದೆಹಲಿ: ಭಯೋತ್ಪಾದನೆ ಮತ್ತು ಉಗ್ರವಾದ ಗಂಭೀರ ಸಮಸ್ಯೆಯಾಗಿದ್ದು, ಇವುಗಳ ವಿರದ್ಧದ ಹೋರಾಟಕ್ಕೆ ಭಾರತ ಹಾಗೂ ಇತರೆ ನೆರೆಯ ರಾಷ್ಟ್ರಗಳಿಗೆ ಸೌದಿ ಅರೇಬಿಯಾ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಬುಧವಾರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಚರ್ಚೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಪುಲ್ವಾಮಾ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ನಂತರ ಭಾರತ–ಪಾಕಿಸ್ತಾನದ ನಡುವೆ ಉಂಟಾಗಿರುವ ಆತಂಕದ ವಾತಾವರಣ ಹಾಗೂ ಇಸ್ಲಾಮಾಬಾದ್‌ ಭೇಟಿಯ ಬಳಿಕ ಸೌದಿ ದೊರೆ ಸಲ್ಮಾನ್‌ ಭಾರತ ಭೇಟಿಯು ಮಹತ್ವ ಪಡೆದಿದೆ.

ಭಾರತದ ಹಲವು ವಲಯಗಳಲ್ಲಿ ಮುಂದಿನ ದಿನಗಳಲ್ಲಿ₹7.11 ಲಕ್ಷ ಕೋಟಿ ಹೂಡಿಕೆಗೆ ಅವಕಾಶವಿರುವುದು ಕಂಡುಬಂದಿದೆ. 2016ರಿಂದ ಈವರೆಗೂ ಭಾರತದಲ್ಲಿ ಸೌದಿ ಅರೇಬಿಯಾ ₹3.12 ಲಕ್ಷ ಕೋಟಿಯಷ್ಟು ಹೂಡಿಕೆ ಮಾಡಿದೆ. ಪ್ರಮುಖವಾಗಿ ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲಾಗಿದೆ.ಪೆಟ್ರೋಕೆಮಿಕಲ್ಸ್‌ ಹಾಗೂ ಸಂಗ್ರಹ ವಲಯದಲ್ಲಿಯೂ ಹೂಡಿಕೆ ವಿಸ್ತರಿಸುವ ಇಚ್ಛೆಯಿದೆ. ಹೂಡಿಕೆಯಿಂದಾಗಿ ಸೌದಿ ಅರೇಬಿಯಾದಲ್ಲಿರುವ ಭಾರತೀಯರು ಹಾಗೂ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೌದಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ADVERTISEMENT

2016ರಲ್ಲಿ ಪ್ರಧಾನಿ ಮೋದಿ ರಿಯಾದ್‌ಗೆ ಭೇಟಿ ನೀಡಿದ್ದರು. ವ್ಯಾಪಾರ, ಹೂಡಿಕೆ ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟಗಳ ಕುರಿತು ಉಭಯ ರಾಷ್ಟ್ರಗಳ ಸಹಕಾರದ ಮಾತುಕತೆ ನಡೆದಿತ್ತು. ಇದಾಗಿ ಮೂರು ವರ್ಷಗಳ ಬಳಿಕೆ ಸೌದಿ ದೊರೆ ಭಾರತಕ್ಕೆ ಭೇಟಿ ನೀಡಿದ್ದಾರೆ.

ಪ್ರಮುಖಾಂಶಗಳು

* ಭಯೋತ್ಪಾದನೆ ಮತ್ತು ಉಗ್ರವಾದ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ಸಮಾನ ಕಾಳಜಿ ವಹಿಸಿದ್ದು, ಮುಂದಿನ ಜನಾಂಗದ ಸುರಕ್ಷತೆ ಖಾತರಿಪಡಿಸಿಕೊಳ್ಳಲುಭಾರತ ಹಾಗೂ ನೆರೆಯ ರಾಷ್ಟ್ರಗಳಿಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಈ ವಿಚಾರದಲ್ಲಿ ಭಾರತ ವಹಿಸಿರುವ ಪಾತ್ರವನ್ನು ಪ್ರಶಂಸಿಸುತ್ತೇವೆ. ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಭಾರತಕ್ಕೆ ಸಹಕಾರ ನೀಡಲಿದ್ದೇವೆ–ಸೌದಿ ದೊರೆ ಸಲ್ಮಾನ್‌

* ಯಾವುದೇ ರೀತಿಯೂ ಭಯೋತ್ಪಾದನೆಗೆ ಬೆಂಬಲ ನೀಡದಿರುವ ಬಗ್ಗೆ ನಾವು ಒಮ್ಮತಕ್ಕೆ ಬಂದಿದ್ದೇವೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ರಾಷ್ಟ್ರಗಳ ಮೇಲೆ ಒತ್ತಡ ಹೇರಬೇಕಾದುದು ಅವಶ್ಯವಾಗಿದೆ. ಉಗ್ರ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲ ಕೊನೆಯಾಗಿಸುವುದು, ಭಯೋತ್ಪಾದನೆ ಅವಕಾಶಗಳಿಗೆ ಅಂತ್ಯ ಹಾಡುವುದು; ಈ ಮೂಲಕ ಯುವ ಜನರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳದಂತೆ ಮಾಡುವುದು...ಈ ಕುರಿತು ಸೌದಿ ಅರೇಬಿಯಾ ಭಾರತದ ಮಾತಿಗೆ ಸಮ್ಮತಿಸಿದೆ– ಪ್ರಧಾನಿ ನರೇಂದ್ರ ಮೋದಿ

* ಇಂಧನ ಪಾಲುದಾರಿಕೆಯೊಂದಿಗೆ ತಂತ್ರ ಕುಶಲತೆಗಳಲ್ಲಿಯೂ ಒಪ್ಪಂದದ ಸಂಬಂಧವೂ ಮಾತುಕತೆ ನಡೆದಿದೆ. ಮೂಲಸೌಕರ್ಯಗಳಲ್ಲಿ ಸೌದಿ ಹೂಡಿಕೆಯನ್ನು ಸ್ವಾಗತಿಸಿದ್ದೇನೆ, ನಮ್ಮ ಸಂಬಂಧ ಕೇವಲ ಕೊಡು–ಕೊಳ್ಳುವಿಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

* ಶಿಷ್ಟಾಚಾರಗಳನ್ನು ಮುರಿದು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಸ್ವತಃಪ್ರಧಾನಿ ಮೋದಿ ಅಪ್ಪುಗೆಯೊಂದಿಗೆ ಸೌದಿ ದೊರೆಯನ್ನು ಬರಮಾಡಿಕೊಂಡಿದ್ದರು

* ಭಾರತ ಮತ್ತು ಅರಬ್‌ ನಡುವಿನ ಸಂಬಂಧ ಡಿಎನ್‌ಎಯಲ್ಲಿ ಬೆರೆತಿದೆ ಎಂದು ಸೌದಿ ದೊರೆ ಸಲ್ಮಾನ್‌ ವರದಿಗಾರರಿಗೆ ಪ್ರತಿಕ್ರಿಯಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.