ಬೆಂಗಳೂರು: ಏರೋ ಇಂಡಿಯಾ–2023ರ ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಎಚ್‌ಎಲ್‌ಎಫ್‌ಟಿ–42 ಜೆಟ್ ಮೇಲಿನ ಹನುಮಂತನ ಚಿತ್ರವನ್ನು ವಿವಾದಗಳ ಹಿನ್ನೆಲೆಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ತೆಗೆದುಹಾಕಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.
ಎಚ್‌ಎಲ್‌ಎಫ್‌ಟಿ–42 ಜೆಟ್‌ನ ಹಿಂಬದಿಯಲ್ಲಿ ಹನುಮಂತನ ಚಿತ್ರವನ್ನು ಅಂಟಿಸಲಾಗಿತ್ತು.
ಜೆಟ್ ಮೇಲೆ ಹನುಮಂತನ ಚಿತ್ರ ಅಂಟಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿ ಕೇಂದ್ರ ಗಣಿ, ಕಲ್ಲಿದ್ದಲು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸೋಮವಾರ ಟ್ವೀಟ್ ಮಾಡಿದ್ದರು.
‘ಮಾರುತ್ ಹೆಸರಿನ ಜೆಟ್ ಮೇಲೆ ಬಜರಂಗಬಲಿ (ಹನುಮಂತನ) ಚಿತ್ರ ವಿಶೇಷವಾಗಿ ರಾರಾಜಿಸುತ್ತಿದೆ’ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.
ಜೋಶಿ ಹಂಚಿಕೊಂಡಿದ್ದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಯುದ್ಧ ವಿಮಾನದ ಮೇಲೆ ಹಿಂದೂ ದೇವರ ಚಿತ್ರವನ್ನು ಚಿತ್ರಿಸಿರುವ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು. ಸಶಸ್ತ್ರ ಪಡೆಗಳು ಯಾವುದೇ ಧಾರ್ಮಿಕ ಪ್ರಾತಿನಿಧ್ಯವನ್ನು ಹೊಂದಿರಬಾರದು. ಅದು ಸೈನಿಕರ ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ವಿಮರ್ಶೆ ಕೇಳಿ ಬಂದಿತ್ತು.
ವಿವಾದಗಳ ಹಿನ್ನೆಲೆಯಲ್ಲಿ ಜೆಟ್ ಮೇಲಿನ ಚಿತ್ರವನ್ನು ತೆಗೆದುಹಾಕುವ ಮೂಲಕ ಎಚ್‌ಎಎಲ್ ಚರ್ಚೆಗಳಿಗೆ ಅಂತ್ಯ ಹಾಡಿದೆ.
ಎಚ್‌ಎಲ್‌ಎಫ್‌ಟಿ-42ಅನ್ನು 'ಮುಂದಿನ ತಲೆಮಾರಿನ ‘ಸೂಪರ್‌ಸಾನಿಕ್ ಟ್ರೈನರ್' ಎಂದು ಎಚ್‌ಎಎಲ್ ಪರಿಗಣಿಸಿದೆ. ಏರೋ ಇಂಡಿಯಾ ಶೋ 2023 ರಲ್ಲಿ ಎಚ್‌ಎಎಲ್ ಮೊದಲ ಬಾರಿಗೆ ಈ ಮಾದರಿಯನ್ನು ಪ್ರದರ್ಶಿಸಿದೆ.
ಆಧುನಿಕ ಯುದ್ಧ ವಿಮಾನ ತರಬೇತಿಯಲ್ಲಿ ಈ ಜೆಟ್ ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.