ADVERTISEMENT

'ಸುಲ್ಲಿ ಡೀಲ್ಸ್‌' ಬಳಿಕ 'ಬುಲ್ಲಿ ಬಾಯಿ' ಆ್ಯಪ್, ಮತ್ತೊಂದು ಧರ್ಮದ ಮಹಿಳೆಯರ ಗುರಿ

ಐಎಎನ್ಎಸ್
Published 2 ಜನವರಿ 2022, 4:18 IST
Last Updated 2 ಜನವರಿ 2022, 4:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: 'ಸುಲ್ಲಿ ಡೀಲ್ಸ್‌' ವಿವಾದದ ಆರು ತಿಂಗಳ ಬಳಿಕ ಮತ್ತೊಂದು ಧರ್ಮದ ಮಹಿಳೆಯರನ್ನು ಗುರಿಯಾಗಿಸಿ 'ಬುಲ್ಲಿ ಬಾಯಿ' ಎಂಬ ಆ್ಯಪ್‌ ಕಾಣಿಸಿಕೊಂಡಿದೆ.

ಜನವರಿ 1ರಂದು ಗಿಟ್‌ಹಬ್‌ ಎಂಬ ವೆಬ್‌ ಪ್ಲಾಟ್‌ಫಾರ್ಮ್‌ನಲ್ಲಿ 'ಬುಲ್ಲಿ ಬಾಯಿ' ಎಂಬ ಹೆಸರಿನ ಆ್ಯಪ್‌ ಕಾಣಿಸಿಕೊಂಡಿದ್ದು, ಅದರಲ್ಲಿ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತೆಯರು, ವಿದ್ಯಾರ್ಥಿನಿಯರು ಮತ್ತು ಪ್ರಸಿದ್ಧ ಮಹಿಳೆಯರ ಅಸಂಖ್ಯ ಚಿತ್ರಗಳನ್ನು ಅಶ್ಲೀಲ ಬರಹದೊಂದಿಗೆ ಅಪ್ಲೋಡ್‌ ಮಾಡಲಾಗಿದೆ.

ಟ್ವಿಟರ್‌ನಲ್ಲಿ @bullibai ಹೆಸರಿನ ಖಾತೆಯಲ್ಲಿ ಬುಲ್ಲಿ ಬಾಯಿ ಆ್ಯಪ್‌ಗೆ ಪ್ರಚಾರ ನೀಡಲಾಗಿದೆ. ಇದರಲ್ಲಿ 'ಖಲಿಸ್ತಾನಿ ಬೆಂಬಲಿಗರು' ಎಂಬು ಬಿಂಬಿಸಿರುವ ಫೋಟೊವನ್ನು ಹಂಚಿಕೊಳ್ಳಲಾಗಿದೆ. ಈ ಆ್ಯಪ್‌ ಮೂಲಕ ಮಹಿಳೆಯರನ್ನು ಬುಕ್‌ ಮಾಡಬಹುದು ಎಂಬ ಬರಹವೂ ಇದೆ. ಇದರೊಂದಿಗೆ ಖಲಿಸ್ತಾನಿ ವಿಚಾರಗಳನ್ನು ಪ್ರಚಾರ ಮಾಡಲಾಗಿದೆ ಎಂದು 'ಐಎಎನ್‌ಎಸ್‌' ವರದಿ ಮಾಡಿದೆ.

ADVERTISEMENT

ಶಿವಸೇನಾ ನಾಯಕಿ ಮತ್ತು ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರು, 'ಈ ವಿಚಾರವಾಗಿ ಮುಂಬೈ ಪೊಲೀಸರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಕಿಡಿಗೇಡಿಗಳನ್ನು ಬಂಧಿಸಲಾಗುವುದು' ಎಂದಿದ್ದಾರೆ.

'ನಾನು ಮುಂಬೈ ಪೊಲೀಸ್‌ ಕಮಿಷನರ್‌ ಮತ್ತು ಕ್ರೈಂ ವಿಭಾಗದ ಡಿಸಿಪಿ ರಶ್ಮಿ ಕರಂದಿಕರ್‌ ಅವರ ಜೊತೆ ಮಾತನಾಡಿದ್ದೇನೆ. ಅವರು ತನಿಖೆ ನಡೆಸಲಿದ್ದಾರೆ. ಮಹಾರಾಷ್ಟ್ರದ ಡಿಜಿಪಿ ಜೊತೆಗೂ ಮಾತನಾಡಿದ್ದೇನೆ. ಈ ಕೃತ್ಯದ ಹಿಂದೆ ಭಾಗಿಯಾಗಿರುವವರನ್ನು ಬಂಧಿಸುತ್ತಾರೆ ಮತ್ತು ಅಶ್ಲೀಲ ಸೈಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸಿದ್ದೇನೆ' ಎಂದು ಪ್ರಿಯಾಂಕ ಚತುರ್ವೇದಿ ತಿಳಿಸಿದ್ದಾರೆ.

'ಕೃತ್ಯದ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಐಪಿಸಿಯ ಸೂಕ್ತ ಸೆಕ್ಷನ್‌ ಅಡಿಯಲ್ಲಿ ಪ್ರಕರಣವನ್ನು ದಾಖಲಿಸುವ ವಿಚಾರವಾಗಿ ಕಾನೂನು ಅಭಿಪ್ರಾಯ ತೆಗೆದುಕೊಂಡಿದ್ದೇವೆ ಎಂದು ಮುಂಬೈ ಪೊಲೀಸರು' ಹೇಳಿದ್ದಾರೆ.

'ಸುಲ್ಲಿ ಡೀಲ್ಸ್‌'ಗೆ ಸಂಬಂಧಿಸಿ ಎರಡು ಎಫ್ಐಆರ್‌ಗಳನ್ನು ದಾಖಲಿಸಲಾಗಿತ್ತು. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದ ಗಿಟ್‌ಹಬ್‌ನಲ್ಲಿ ಈ ಆ್ಯಪ್‌ಅನ್ನು ಸೃಷ್ಟಿಸಲಾಗಿದೆ ಎಂದು ದೂರಲಾಗಿತ್ತು. ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.