ADVERTISEMENT

ರಾಜ್ಯಸಭೆಗೆ ಟಿಕೆಟ್: ಇಬ್ಬಗೆ ನೀತಿಯಿಂದ ಟ್ರೋಲ್ ಆದ ಪತ್ರಕರ್ತೆ ಸಾಗರಿಕಾ ಘೋಷ್

ಖ್ಯಾತ ಪತ್ರಕರ್ತೆ ಸಾಗರಿಕಾ ಘೋಷ್ (Sagarika Ghose) ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾಗ ಕೊಟ್ಟಿದ್ದ ಹೇಳಿಕೆ ಹಾಗೂ ಈಗಿನ ಅವರ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2024, 11:06 IST
Last Updated 13 ಫೆಬ್ರುವರಿ 2024, 11:06 IST
<div class="paragraphs"><p>ಸಾಗರಿಕಾ ಘೋಷ್</p></div>

ಸಾಗರಿಕಾ ಘೋಷ್

   

(ಚಿತ್ರ: ಎಕ್ಸ್‌ ಖಾತೆ)

ಬೆಂಗಳೂರು: ಫೆಬ್ರುವರಿ 27ಕ್ಕೆ ರಾಜ್ಯಸಭೆ ದೈವಾರ್ಷಿಕ ಚುನಾವಣೆ ನಡೆಯಲಿದೆ. 15 ರಾಜ್ಯಗಳ 56 ಸ್ಥಾನಗಳಿಗೆ ಚುನಾವಣೆ ಜರುಗಲಿದೆ. ಈಗಾಗಲೇ ಹಲವು ಪಕ್ಷಗಳು ತಮ್ಮ ಹುರಿಯಾಳುಗಳನ್ನು ಘೋಷಿಸಿವೆ.

ADVERTISEMENT

ಪಶ್ಚಿಮ ಬಂಗಾಳ ರಾಜ್ಯದಿಂದ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಟಿಎಂಸಿ 4 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಇದಕ್ಕಾಗಿ ತನ್ನ ನಾಲ್ವರು ಅಭ್ಯರ್ಥಿಗಳನ್ನು ಟಿಎಂಸಿ ಘೋಷಿಸಿದೆ.

ವಿಶೇಷವೆಂದರೆ ಈ ಪಟ್ಟಿಯಲ್ಲಿ ಖ್ಯಾತ ಪತ್ರಕರ್ತೆ ಸಾಗರಿಕಾ ಘೋಷ್ (Sagarika Ghose) ಅವರೂ ಇದ್ದಾರೆ. ಟಿಎಂಸಿಯಿಂದ ಸಾಗರಿಕಾ ಘೋಷ್ ರಾಜ್ಯಸಭೆ ಸದಸ್ಯೆಯಾಗುವುದು ಬಹುತೇಕ ಖಚಿತವಾಗಿದೆ.

ಆದರೆ, ಸಾಗರಿಕಾ ಘೋಷ್ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾಗ ಕೊಟ್ಟಿದ್ದ ಹೇಳಿಕೆ ಹಾಗೂ ಈಗಿನ ಅವರ ನಡೆ ಇಂಟರ್‌ನೆಟ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

6 ವರ್ಷಗಳ ಹಿಂದೆ ಸಾಗರಿಕಾ ಘೋಷ್ ಅವರು, ‘ನಾನು ಯಾವುದೇ ರಾಜಕೀಯ ಪಕ್ಷದಿಂದ ರಾಜ್ಯಸಭೆ, ಲೋಕಸಭೆ ಅಥವಾ ವಿಧಾನ ಪರಿಷತ್‌ಗೆ ಟಿಕೆಟ್ ಆಕಾಂಕ್ಷಿಯಲ್ಲ. ಬೇಕಾದರೆ ನಾನು ನಿಮಗೆ ಇದನ್ನು ಲಿಖಿತವಾಗಿ ಬರೆದು ಕೊಡಬಲ್ಲೆ ಅಥವಾ ಈ ಟ್ವೀಟ್ ಸೇವ್ ಮಾಡಿಟ್ಟುಕೊಳ್ಳಿ’ ಎಂದು ಟ್ವೀಟ್ ಮಾಡಿದ್ದರು.

ಅಷ್ಟೇ ಅಲ್ಲದೇ ಅವರು, ‘ರಾಜಕೀಯ ಪಕ್ಷಗಳ ಜೊತೆ ಪತ್ರಕರ್ತರು ಯಾವುದೇ ಕಾರಣಕ್ಕೂ ಸಂಬಂಧ ಹೊಂದಬಾರದು. ಇದು ಪತ್ರಿಕೋದ್ಯಮ ಅಷ್ಟೇ ಅಲ್ಲದೇ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶಪಡಿಸಲು ಕಾರಣ ಆಗುತ್ತದೆ’ ಎಂದು ಹಲವು ವೇದಿಕೆಗಳಲ್ಲಿ ಹೇಳಿದ್ದರು.

ಈ ಎಲ್ಲ ಹೇಳಿಕೆ, ಟ್ವೀಟ್‌ಗಳು ಹಾಗೂ ವಿಡಿಯೊ ಹೇಳಿಕೆಗಳನ್ನು ಹಲವರು ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಾಗರಿಕಾ ಅವರ ಇಬ್ಬಗೆಯ ನೀತಿಯನ್ನು ಟ್ರೋಲ್ ಮಾಡಿದ್ದಾರೆ. ಅನೇಕರು ಘೋಷ್ ಅವರ ನಡೆಯನ್ನು ಟೀಕಿಸಿದ್ದಾರೆ. ಇನ್ನೂ ಕೆಲವರು ಕಾಲಾಯ ತಸ್ಮೈ ನಮಃ ಎಂದಿದ್ದಾರೆ.

‘ಪತ್ರಕರ್ತರು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬುದಕ್ಕೆ ಇದು ನೇರ ಉದಾಹರಣೆ’ ಎಂದು ಕೆಲವರು ಟೀಕಿಸಿದ್ದಾರೆ.

ಸಾಗರಿಕಾ ಸ್ಪಷ್ಟನೆ

ಟೀಕೆಗಳು ಹೆಚ್ಚು ವ್ಯಾಪಕವಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿ ಎಕ್ಸ್‌ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಾಗರಿಕಾ ಘೋಷ್, ‘ನಾನು 2018 ರಲ್ಲಿ ಮಾಡಿರುವ ಟ್ವೀಟ್ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಪತ್ರಿಕೋದ್ಯಮದಲ್ಲಿ ಇದ್ದುಕೊಂಡೇ ನಾನು ರಾತ್ರೋರಾತ್ರಿ ಈ ನಿರ್ಧಾರ ತೆಗೆದುಕೊಂಡಿಲ್ಲ. ನಾನು 2020 ರಿಂದ ಸಕ್ರಿಯ ಪತ್ರಿಕೋದ್ಯಮದಿಂದ ದೂರ ಉಳಿದಿದ್ದೇನೆ. ಕಳೆದ ಮೂರು ವರ್ಷದಿಂದ ನಾನು ಹವ್ಯಾಸಿ ಪತ್ರಕರ್ತೆಯಾಗಿ ಮಾತ್ರ ತೊಡಗಿಸಿಕೊಂಡಿದ್ದೇನೆ’ ಎಂದಿದ್ದಾರೆ.

‘ಮೋದಿ ಸರ್ಕಾರದ ನಿರಂಕುಶಾಧಿಕಾರ ಹೆಚ್ಚುತ್ತಿರುವಾಗ ಮತ್ತು ಅವರು ದೇಶದ ಪತ್ರಿಕಾರಂಗದ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಿರುವಾಗ ಟಿಎಂಸಿಯ ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ನಾನು ಭಾಗಿಯಾಗುವುದು ಸೂಕ್ತವೆಂದು‘ ಈ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಖ್ಯಾತ ಪತ್ರಕರ್ತ ರಾಜದೀಪ್ ಸರ್‌ದೇಸಾಯಿ ಅವರ ಪತ್ನಿಯಾಗಿರುವ ಪಶ್ಚಿಮ ಬಂಗಾಳ ಮೂಲದ 59 ವರ್ಷದ ಸಾಗರಿಕಾ ಘೋಷ್ ಅವರು, ಟೈಮ್ಸ್ ನೌ, ಟೈಮ್ಸ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್‌ ಸೇರಿದಂತೆ ಮುಂತಾದ ಮಾಧ್ಯಮಗಳಲ್ಲಿ ಮೂರು ದಶಕಗಳ ಕಾಲ ಪತ್ರಕರ್ತೆಯಾಗಿ ಕೆಲಸ ಮಾಡಿದ್ದಾರೆ. ರಾಜಕೀಯ ಅಂಕಣಕಾರ್ತಿಯಾಗಿಯೂ ಪ್ರಸಿದ್ಧ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ.

ಸಾಗರಿಕಾ ಜೊತೆ ಸುಶ್ಮಿತಾ ದೇವ್, ಮಮತಾ ಬಾಲಾ ಠಾಕೂರ್, ನದಿಮುಲ್ಲಾ ಹಕ್ ಅವರಿಗೆ ರಾಜ್ಯಸಭೆ ಟಿಕೆಟ್ ಘೋಷಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.