ಕಾನ್ಪುರ: ಪುಣೆಯಲ್ಲಿ ಅಪ್ರಾಪ್ತನೊಬ್ಬ ಪೋಶೆ ಕಾರು ಚಲಾಯಿಸಿ ಅಪಘಾತವೆಸಗಿ ಇಬ್ಬರ ಸಾವಿಗೆ ಕಾರಣನಾದ ಘಟನೆಯ ಬೆನ್ನಲೇ, ಕಳೆದ ಅಕ್ಟೋಬರ್‌ನಲ್ಲಿ ಹಿಂಟ್–ಆ್ಯಂಡ್–ರನ್ ಪ್ರಕರಣದಲ್ಲಿ ಇಬ್ಬರು ಸಾವಿಗೆ ಕಾರಣನಾದ ಬಾಲಕನ ವಿರುದ್ಧ ಪೊಲೀಸರು ನಿರ್ಲಕ್ಷ್ಯವಹಿಸಿದ್ದಕ್ಕಾಗಿ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಈ ಘಟನೆ ಬಗ್ಗೆ ಕಾನ್ಪುರ ಹೆಚ್ಚುವರಿ ಪೊಲೀಸ್ ಆಯುಕ್ತ ಹರೀಶ್ ಚಂದ್ರ ಅವರು ತನಿಖೆಗೆ ಆದೇಶಿಸಿದ್ದಾರೆ. ಹಿಟ್-ಆ್ಯಂಡ್-ರನ್ ಮಾಡಿದ ಬಾಲಕನ ವಿರುದ್ಧ ದೋಪಾರೋಪ ಪಟ್ಟಿ ಸಲ್ಲಿಸಲು ವಿಳಂಬ ಹಾಗೂ ಇಡೀ ಘಟನೆ ಬಗ್ಗೆ ನಿರ್ಲಕ್ಷ್ಯ ಮಾಡಿರುವುದರ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.
ಈ ಅಪಘಾತವೆಸಗಿದ ಬಾಲಕನ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹರೀಶ್ ಚಂದ್ರ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಪುಣೆ ಪೋಶೆ ಕಾರು ಅಪಘಾತ ಘಟನೆಯ ಬಳಿಕ ಈ ಹಳೆಯ ಪ್ರಕರಣ ಮತ್ತೆ ತನಿಖೆಯ ಜಾಡು ಹಿಡಿದಿದ್ದು ಇದೀಗ ಮುನ್ನಲೆಗೆ ಬಂದಿದೆ.
ಕಳೆದ ಅಕ್ಟೋಬರ್‌ನಲ್ಲಿ ಕಾನ್ಪುರದ ಬರ್ರಾ ಪ್ರದೇಶದಲ್ಲಿ ಈ ಬಾಲಕ ವೇಗವಾಗಿ ಕಾರು ಚಲಾಯಿಸಿ ಇಬ್ಬರಿಗೆ ಡಿಕ್ಕಿ ಹೊಡೆದಿದ್ದ. ಘಟನೆಯಲ್ಲಿ ಅವರು ಮೃತಪಟ್ಟಿದ್ದರು. ಮತ್ತೆ ಅದೇ ಬಾಲಕ ಮಾರ್ಚ್‌ನಲ್ಲಿ ನವಾಬ್‌ಗಂಜ್ ಪ್ರದೇಶದಲ್ಲಿ ವೇಗವಾಗಿ ಕಾರು ಚಲಾಯಿಸಿ ನಾಲ್ವರಿಗೆ ಡಿಕ್ಕಿ ಹೊಡೆದಿದ್ದ. ಘಟನೆಯಲ್ಲಿ ಅವರು ಗಾಯಗೊಂಡಿದ್ದರು. ನಂತರ ಪೊಲೀಸರು ಬಾಲಕನನ್ನು ಬಂಧಿಸಿ ಬಾಲ ನ್ಯಾಯ ಮಂಡಳಿ ನಿಲಯಕ್ಕೆ ಕಳುಹಿಸಿದ್ದಾರೆ.
ಬಾಲಕನ ತಂದೆ ವೈದ್ಯರಾಗಿದ್ದಾರೆ. ಎರಡನೇ ಸಲ ಮಗನಿಗೆ ವಾಹನ ಚಲಾಯಿಸಲು ಅವಕಾಶ ಮಾಡಿಕೊಟ್ಟಿರುವುದು ಕಂಡುಬಂದಲ್ಲಿ ಬಾಲಕನ ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹರೀಶ್ ಚಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.