‘ಮುಂದಿನ ಪೀಳಿಗೆಯ ರಾಜಕಾರಣಿ ಆಗಬೇಕು ಎನ್ನುವ ಇಚ್ಛೆ ಇದ್ದರೆ, ಅಂತರ್ಜಾಲವನ್ನು ಚೆನ್ನಾಗಿ ಬಲ್ಲವನಾಗಬೇಕು’– ಎಂದು ಐಟಿ ಸೆಲ್‌ನ ವ್ಯಕ್ತಿಯೊಬ್ಬರು ಯುವ ರಾಜಕಾರಣಿಯೊಬ್ಬರಿಗೆ ನಿರ್ದೇಶಕ ಸುಧೀರ್ ಮಿಶ್ರಾ ಅವರ ‘ಅಫ್ವಾ’ ಸಿನಿಮಾದಲ್ಲಿ ಹೇಳುತ್ತಾರೆ. ಈ ಸಂಭಾಷಣೆಯು ಆಧುನಿಕ ಯುಗದ ‘ಸುಳ್ಳುಸುದ್ದಿ ರಾಜಕಾರಣ’ವನ್ನು ತೆರೆದಿಡುತ್ತದೆ. ಅನುರಾಗ್ ಸಿನ್ಹಾ ಸಿನಿಮಾವನ್ನು ನಿರ್ಮಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು ಸಮಾಜದಿಂದ ಬೇರ್ಪಟ್ಟು ಬೇರೆಯದೆ ಸುಳ್ಳಿನ ಸಮಾಜಗಳನ್ನು ನಿರ್ಮಿಸಿಕೊಂಡಿವೆ. ತಮ್ಮ ಅಧಿಕಾರ ಲಾಲಸೆಗಾಗಿ ರಾಜಕಾರಣಿಗಳು ಇಂಥ ಸುಳ್ಳಿನ ಸಮಾಜಗಳನ್ನು ಬಳಸಿಕೊಳ್ಳುತ್ತಾರೆ. ಈ ಸುಳ್ಳನ್ನೇ ನಿಜ ಎಂದು ನಂಬಿಸುತ್ತಾರೆ. ಕೃತಕ ಬುದ್ಧಿಮತ್ತೆಯ ಈ ಕಾಲಘಟ್ಟದಲ್ಲಿ ಇಂಥ ಸುಳ್ಳಿನ ಸಮಾಜಗಳೇ ಜನರನ್ನು ಆಳುತ್ತಿವೆ, ಅಭಿಪ್ರಾಯ ರೂಪಿಸುತ್ತಿವೆ. ನಿಜದ ಸಮಾಜದ ಜನರ ಮೇಲೆ ಸುಳ್ಳಿನ ಸಮಾಜದ ಜನರು ನಡೆಸುವ ದಾಳಿಗಳು, ಇದರಿಂದ ಹುಟ್ಟುಕೊಳ್ಳುವ ದಂಗೆಗಳಿಂದ ಆದ ಗಾಯಗಳು ಮಾತ್ರ ವ್ರಣವಾಗುತ್ತವೆ. ಈ ಎಲ್ಲದರ ಕುರಿತು ಸಿನಿಮಾವು ತೀಕ್ಷ್ಣವಾಗಿ, ಅಷ್ಟೇ ನೇರವಾಗಿ ನಮ್ಮ ಮುಂದೆ ತೆರೆದುಕೊಳ್ಳುತ್ತದೆ.
ರಾಜಸ್ಥಾನದ ಸಾವಲ್‌ಪುರ ಈ ಸಿನಿಮಾದ ಕತೆ ನಡೆಯುವ ಸ್ಥಳ. ಈ ಪ್ರದೇಶದ ಯುವ ರಾಜಕಾರಣಿಯು ತನ್ನ ರಾಜಕೀಯ ಜೀವನವನ್ನು ರೂಪಿಸಿಕೊಳ್ಳುವ ತವಕದಲ್ಲಿ ಇದ್ದಾನೆ. ಇದಕ್ಕಾಗಿ ಆತ ಏನನ್ನೂ ಮಾಡಲು ತಯಾರಾಗಿ ನಿಂತಿದ್ದಾನೆ.
‘ನಾವು ಇನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ಮುಸ್ಲಿಮರು ಹೆಚ್ಚಿರುವ ಪ್ರದೇಶದಲ್ಲಿ ಈತ ರೋಡ್ ಶೋ ನಡೆಸುತ್ತಾನೆ. ಈ ವೇಳೆಗೆ ಈತನ ತಲೆಗೆ ಯಾರೊ ಕಲ್ಲೆಸೆಯುತ್ತಾರೆ. ಇದರಿಂದ ಕುಪಿತಗೊಂಡ ಆತನ ಚೇಲಾ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಕೊಲೆ ಮಾಡುತ್ತಾನೆ. ಯುವ ರಾಜಕಾರಣಿ ಹೇಳಿದ್ದರಿಂದಲೇ ಈ ಕೊಲೆ ನಡೆದಿದೆ ಎನ್ನುವ ಸುದ್ದಿ ವೇಗವಾಗಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತದೆ. ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಚೇಲಾನನ್ನು ಕೊಲೆ ಮಾಡುವಂತೆ ಪೊಲೀಸ್ ಅಧಿಕಾರಿಯೊಬ್ಬರಿಗೆ ಸೂಚಿಸುತ್ತಾನೆ. ಇದು ಸಫಲಗೊಳ್ಳುವುದಿಲ್ಲ.
ತನ್ನ ರಾಜಕೀಯ ನಿಲುವಿನ ಕಾರಣಕ್ಕಾಗಿ ತನ್ನನ್ನು ವರಿಸಬೇಕಿದ್ದ ಹುಡುಗಿಯು ತನ್ನನ್ನು ಬಿಟ್ಟು ಹೋಗುವುದು ತನಗೆ ಅವಮಾನ ಮತ್ತು ಇದು ತನ್ನ ರಾಜಕೀಯ ಜೀವನಕ್ಕೆ ಬಿದ್ದ ಕೊಡಲಿ ಏಟು ಎಂದು ಭಾವಿಸಿಕೊಳ್ಳುತ್ತಾನೆ. ಮದುವೆ ಧಿಕ್ಕರಿಸಿ ಓಡಿಹೋದ ಹುಡುಗಿಗೆ ವ್ಯಕ್ತಿಯೊಬ್ಬ ಸಹಾಯ ಮಾಡುತ್ತಾನೆ. ಈ ವ್ಯಕ್ತಿಯು ಮುಸ್ಲಿಂ ಎಂದು ಮಾಹಿತಿ ಪಡೆದುಕೊಂಡ ಯುವ ರಾಜಕಾರಣಿಯು ‘ಸಾವಲ್‌ಪುರಲ್ಲಿ ಹುಡುಗಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಓಡಿ ಹೋಗಿದ್ದಾಳೆ #lovejihad’ ಎಂಬ ಬರಹವುಳ್ಳ ವಿಡಿಯೊವನ್ನು ಹರಿಬಿಡುತ್ತಾನೆ. ಈ ಸುದ್ದಿಯು ಕಾಡ್ಗಿಚ್ಚಿನಂತೆ ದೇಶದಾದ್ಯಂತ ಹರಿದಾಡ ತೊಡಗುತ್ತದೆ.
ಮುಸ್ಲಿಂ ವ್ಯಕ್ತಿಯ ಹಿಂದೂ ಹೆಂಡತಿಯು ಲೇಖಕಿ. ಆಕೆಯ ಪುಸ್ತಕವೊಂದು ‘ಸಾಹಿತ್ಯ ಉತ್ಸವ’ವೊಂದರಲ್ಲಿ ಬಿಡುಗಡೆ ಆಗಲಿರುತ್ತದೆ. ಈ ಕಾರ್ಯಕ್ರಮಕ್ಕಾಗಿಯೇ ಮುಸ್ಲಿಂ ವ್ಯಕ್ತಿಯು ಹೊರಟಿರುತ್ತಾನೆ. ಆದರೆ, ಮಾರ್ಗ ಮಧ್ಯದಲ್ಲಿ ಹಲವು ಘಟನೆಗಳು ಜರುಗುತ್ತದೆ. ಇದರ ಮಧ್ಯೆ ಕೊಲೆಗಾರ ಚೇಲಾ ತಪ್ಪಿಸಿಕೊಂಡು ಲಾರಿಯೊಂದರಲ್ಲಿ ಸುರಕ್ಷಿತ ಸ್ಥಳಕ್ಕೆ ಹೋಗುತ್ತಿರುತ್ತಾನೆ. ಆ ಲಾರಿಯೊಳಗೆ ಗೋವುಗಳನ್ನು ಹೊತ್ತೊಯ್ಯಲಾಗುತ್ತಿದೆ ಎಂದು ಮತ್ತೊಂದು ಸುಳ್ಳು ಸುದ್ದಿಯನ್ನು ಯುವರಾಜಕಾರಣಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡುತ್ತಾನೆ.
ಮುಸ್ಲಿಂ ವ್ಯಕ್ತಿಯ ಸಾವಿನಿಂದ ಸಾವಲ್‌ಪುರಲ್ಲಿ ಕೋಮು ಸಂಘರ್ಷ ಎದ್ದಿರುತ್ತದೆ. ಇದಕ್ಕೆ ಸರಿಯಾಗಿ, ಈ ಎರಡು ಸುಳ್ಳು ಸುದ್ದಿಗಳು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತವೆ.
ಓಡಿಹೋಗಿದ್ದ ಹುಡುಗಿ ಹಾಗೂ ಮುಸ್ಲಿಂ ವ್ಯಕ್ತಿಯು ಸಂತಾನುಸಂತು ಎಂಬಂತೆ ಯುವ ರಾಜಕಾರಣಿಯ ಚೇಲಾ ಇದ್ದ ಲಾರಿಯಲ್ಲಿಯೇ ಪ್ರಯಾಣ ಮಾಡುವ ಸಂದರ್ಭ ಬರುತ್ತದೆ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಯುವ ರಾಜಕಾರಣಿಯು ಲಾರಿಯ ಕುರಿತ ಸುದ್ದಿಯನ್ನು ಅಂತರ್ಜಾಲದಿಂದ ಹಿಂಪಡೆದುಕೊಳ್ಳುವ ಪ್ರಯತ್ನ ನಡೆಸುತ್ತಾನೆ. ‘ಒಮ್ಮೆ ಹೀಗೆ ಹರಿದಾಡಿದ ಸುದ್ದಿಯನ್ನು ದೇವರಿಂದಲೂ ಹಿಂಪಡೆದುಕೊಳ್ಳಲು ಸಾಧ್ಯವಿಲ್ಲ’ ಎಂಬ ಉತ್ತರವು ಈ ವಿಡಿಯೊವನ್ನು ಹರಿಬಿಟ್ಟ ಐಟಿ ಸೆಲ್‌ನವರಿಂದ ಬರುತ್ತದೆ. ಕೇಸರಿ ಶಾಲುಗಳನ್ನು ಹಾಕಿಕೊಂಡು ಲಾರಿಯನ್ನು ಹುಡುಕಲು ಸಾವಿರಾರು ಸಂಖ್ಯೆಯಲ್ಲಿ ಬೈಕ್‌ಗಳು ಬೀದಿಗಿಳಿಯುತ್ತವೆ.
ಸಾಹಿತ್ಯ ಉತ್ಸವ ನಡೆಯುವ ಸ್ಥಳಕ್ಕೆ ಲಾರಿಯಲ್ಲಿ ಬಂದಿಳಿದ ಮುಸ್ಲಿಂ ವ್ಯಕ್ತಿಯ ಪ್ರವೇಶವನ್ನು ಉತ್ಸವದ ಸಂಯೋಜಕರು ನಿರಾಕರಿಸುತ್ತಾರೆ. ಎಷ್ಟೇ ಬೇಡಿಕೊಂಡರು ಉತ್ಸವದ ಒಳಗೆ ಆತನಿಗೆ ಪ್ರವೇಶ ಸಿಗುವುದಿಲ್ಲ. ಈ ಹೊತ್ತಿಗೆ ಸಿನಿಮಾವು ಬೇರೆಯದೇ ಚರ್ಚೆಗೆ ಅಣಿಯಾಗುತ್ತಿರುತ್ತದೆ.
ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳಿನ ಸಮಾಜ ನಿರ್ಮಾಣಗೊಂಡಿರುವುದು ಒಂದೆಡೆ. ಇನ್ನೊಂದೆಡೆ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದರ ಪರಿವೆಯೇ ಇಲ್ಲದೆ, ಸಂಸ್ಕೃತಿ, ಸಾಹಿತ್ಯ, ನಾಟಕ, ನೃತ್ಯ ಎಂದು ಮುಚ್ಚಿದ ಕೋಟೆಗಳ ಹಿಂದೆ ಇಂಥ ಉತ್ಸವಗಳ ನಡೆಯುತ್ತಿರುತ್ತವೆ. ಇಂಥ ಬುದ್ಧಿಜೀವಿಗಳ, ಚಿಂತಕರ ಕುರಿತು ಸಿನಿಮಾವು ಕಟು ವಿಮರ್ಶೆ ಮಾಡಿದೆ. ಗಂಡನನ್ನು ಒಳಗೆ ಬಿಟ್ಟುಕೊಳ್ಳುವ ಕುರಿತು ಹೆಂಡತಿ ಹಾಗೂ ಉತ್ಸವದ ಸಂಯೋಜಕರ ಜೊತೆ ಸಂಭಾಷಣೆಗಳು ತೀಕ್ಷ್ಣವಾಗಿವೆ.
ಕೊನೆಯಲ್ಲಿ ಸುಳ್ಳು ಸುದ್ದಿ ಹಬ್ಬಿದ ಯುವ ರಾಜಕಾರಣಿಯು ತಾನು ಸೃಷ್ಟಿಸಿದ ಸುಳ್ಳಿನ ಕಾರಣಕ್ಕಾಗಿಯೇ ಹತ್ಯೆಗೀಡಾಗುತ್ತಾನೆ. ಇವೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿ ಹುಡುಗಿಯು ಮಾಡಿದ ವಿಡಿಯೊವು ಯಾರ ಮೊಬೈಲ್‌ಗಳನ್ನು ತಲುಪುವುದೇ ಇಲ್ಲ. #lovejihad ಎಂಬ ಸುಳ್ಳು ಸುದ್ದಿ ಮಾತ್ರವೇ ಉಳಿದುಕೊಳ್ಳುತ್ತದೆ.
ಅಧಿಕಾರದ ಆಸೆಗಾಗಿ ರಾಜಕಾರಣಿಯೊಬ್ಬ ಸೃಷ್ಟಿಸುವ ಸುಳ್ಳುಗಳು ಸಾಮುದಾಯಿಕವಾಗಿ ಬೀರುವ ಪರಿಣಾಮ ದೊಡ್ಡ ಮಟ್ಟದ್ದು. ಹೀಗೆ ಒಮ್ಮೆ ಹರಿಬಿಟ್ಟ ಸುದ್ದಿಯನ್ನು ಸರಿಪಡಿಸಲೂ ಆಗುವುದಿಲ್ಲ, ಬದಲಿಸಲೂ ಆಗುವುದಿಲ್ಲ, ಹಿಂಪಡೆಯಲೂ ಬರುವುದಿಲ್ಲ. ‘ಇದು ಸುಳ್ಳು ಸುದ್ದಿ ಅಲ್ಲವಾ?’. ‘ಹೌದು, ಯಾರು ಇದನ್ನು ಕೇರ್ ಮಾಡುತ್ತಾರೆ. ಹಬ್ಬಿಸುವವರು? ನಂಬುವವರು?’ ಎಂಬ ಸಿನಿಮಾದ ಸಂಭಾಷಣೆಗಳು ನಮ್ಮ ಪ್ರಜ್ಞೆಯನ್ನು ಎಚ್ಚರಿಸುತ್ತವೆ.
ಯುವ ರಾಜಕಾರಣಿ ಹತ್ಯೆ ನಡೆದ ಬಳಿಕ, ಘಟನಾಸ್ಥಳಕ್ಕೆ ಬರುವ ಪೊಲೀಸರು ಲಾರಿಯಲ್ಲೇನಿದೆ ಎಂದು ಪರೀಕ್ಷಿಸಲು ಲಾರಿಯ ಹಿಂಬಾಗಿಲನ್ನು ತೆರೆಯುತ್ತಾರೆ. ಹತ್ತಾರು ಕತ್ತೆಗಳು, ಜೋರಾಗಿ ಕೂಗಿಕೊಳ್ಳುತ್ತಾ ಹೊರ ಓಡಿಬರುತ್ತದೆ...!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.