ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿರುವ ಸೇನಾ ನೇಮಕಾತಿಗೆ ಸಂಬಂಧಿಸಿದ 'ಅಗ್ನಿಪಥ' ಯೋಜನೆಗೆ ಅರ್ಜಿ ಸಲ್ಲಿಸುವವರು ಲಿಖಿತ ರೂಪದಲ್ಲಿ ಪ್ರತಿಜ್ಞಾ ಘೋಷಣೆಯನ್ನು ನೀಡಬೇಕಾಗುತ್ತದೆ ಎಂದು ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ. ಅಗ್ನಿಪಥ ಯೋಜನೆಯನ್ನು ವಿರೋಧಿಸಿ ದೇಶದ ಹಲವು ಭಾಗಗಳಲ್ಲಿ ಯುವ ಜನತೆ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಈ ಸೂಚನೆ ಹೊರಬಂದಿದೆ.
ಭಾರತೀಯ ಸೇನೆ, ನೌಕಾದಳ ಹಾಗೂ ವಾಯುಪಡೆಯ ಉನ್ನತ ಅಧಿಕಾರಿಗಳು ಹಾಗೂ ಅನಿಲ್ ಪುರಿ ಅವರು ಅಗ್ನಿವೀರರ ನೇಮಕಾತಿಯ ಕುರಿತು ಮಾಧ್ಯಮಗಳಿಗೆ ಭಾನುವಾರ ಮಾಹಿತಿ ನೀಡಿದರು. 'ಅಗ್ನಿವೀರರು, ತಾವು ಯಾವುದೇ ಹಿಂಸಾತ್ಮಕ ಪ್ರತಿಭಟನೆ ಅಥವಾ ಗಲಭೆಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಘೋಷಿಸಿ ಲಿಖಿತ ಪ್ರತಿಜ್ಞಾವಚನವನ್ನು ನೀಡಬೇಕು' ಎಂದಿದ್ದಾರೆ.
ಸೇನಾ ನೇಮಕಾತಿ ಬಯಸುವ ಅಭ್ಯರ್ಥಿಗಳನ್ನು 'ಅಗ್ನಿವೀರರಾಗಿ' ಪರಿಗಣಿಸುವುದಕ್ಕೂ ಮುನ್ನ ಅವರ ಹಿನ್ನೆಲೆಯನ್ನು ಪೊಲೀಸ್ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದಿರುವ ಅವರು, 'ಸಶಸ್ತ್ರ ಪಡೆಗಳಲ್ಲಿ ಅಶಿಸ್ತಿಗೆ ಅವಕಾಶವಿಲ್ಲ. ಯಾವುದೇ ಅಭ್ಯರ್ಥಿಯ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿದ್ದರೆ, ಅವರು ಅಗ್ನಿವೀರರ ಜೊತೆಯಾಗಲು ಅವಕಾಶ ಇರುವುದಿಲ್ಲ' ಎಂದು ಹೇಳಿದ್ದಾರೆ.
ಅಗ್ನಿಪಥ ಯೋಜನೆಯಡಿಯಲ್ಲಿ ನೇಮಕಗೊಳ್ಳಲು ಗರಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 23 ವರ್ಷಗಳಿಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಗುರುವಾರ ರಾತ್ರಿ ತೀರ್ಮಾನಿಸಿತ್ತು. ಅದರ ಬೆನ್ನಲ್ಲೇ ಈ ಯೋಜನೆಯಡಿ ನೇಮಕಗೊಂಡ ಅಗ್ನಿವೀರರು 4 ವರ್ಷಗಳ ಅವಧಿ ಪೂರೈಸಿದ ಬಳಿಕ, ವಿವಿಧ ನೇಮಕಾತಿಗಳಲ್ಲಿ ಶೇಕಡ 10 ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದೆ. ಜತೆಗೆ, ಸಾರ್ವಜನಿಕ ಉದ್ದಿಮೆಗಳಲ್ಲೂ (ಪಿಎಸ್‌ಯು) ಅಗ್ನಿವೀರರನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ.
ಅಗ್ನಿಪಥ ಯೋಜನೆಯಲ್ಲಿನ ವಯೋಮಿತಿ, ಸೇವಾವಧಿ ಮತ್ತು ಪಿಂಚಣಿ ನಿಯಮಗಳ ಬಗ್ಗೆ ವಿರೋಧ ವ್ಯಕ್ತಪಡಿಸಿ ದೇಶದ ಹಲವು ಭಾಗಗಳಲ್ಲಿ ನಡೆದಿರುವ ಪ್ರತಿಭಟನೆಗಳು ಹಿಂಸಾರೂಪ ಪಡೆದಿವೆ. ಬಿಹಾರ ಸೇರಿದಂತೆ ಕೆಲವು ಕಡೆ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರು ಮತ್ತು ಯುವ ಜನತೆಯ ನಡುವೆ ಸಂಘರ್ಷ ಉಂಟಾಗಿ ಗೋಲಿಬಾರ್ ಕೂಡ ನಡೆದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಅಗ್ನಿಪಥ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಸೇನಾ ವ್ಯವಹಾರಗಳ ಇಲಾಖೆಯು, ಯೋಜನೆಯನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.