ನವದೆಹಲಿ: ಅಗ್ನಿಪಥ ಯೋಜನೆಯು ದೇಶದ ಯುವಕರಿಗೆ ಒಳ್ಳೆಯ ಅವಕಾಶವಾಗಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಿಲೇಕಣಿ ಹೇಳಿದ್ದಾರೆ.
41ನೇ ವಾರ್ಷಿಕ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅಗ್ನಿವೀರರ ನೇಮಕ ಕುರಿತಾದ ಸರ್ಕಾರದ ಯೋಜನೆಯ ಸಾಮರ್ಥ್ಯವನ್ನು ಇನ್ಫೋಸಿಸ್ ಗುರುತಿಸಿದೆ ಎಂದು ಅವರು ಹೇಳಿದ್ಧಾರೆ.
‘ಅಗ್ನಿಪಥ ಯೋಜನೆಯು ಯುವಕರಿಗೆ ಶಿಸ್ತಿನ ವಾತಾವರಣದಲ್ಲಿ ವೃತ್ತಿ ಜೀವನ ಆರಂಭಿಸಲು ಉತ್ತಮ ಅವಕಾಶ ಮಾತ್ರವಲ್ಲದೆ, ಭವಿಷ್ಯದ ವೃತ್ತಿ ಜೀವನದ ದೃಷ್ಟಿಯಿಂದ ಕೌಶಲ್ಯ ವೃದ್ಧಿಸಿಕೊಳ್ಳಲು ನೆರವಾಗಲಿದೆ. ಇನ್ಫೋಸಿಸ್ ಸಹ ಯಾವಾಗಲೂ ಕೌಶಲ್ಯವನ್ನು ವೃದ್ಧಿಸಲು ಪ್ರಯತ್ನಿಸುತ್ತಿರುತ್ತದೆ. ಉದ್ಯೋಗಿಗಳ ನೇಮಕಾತಿ ವಿಷಯದಲ್ಲಿ ನಾವು ನಮ್ಮದೇ ಆದ ಸ್ಥಾಪಿತ ನಿಯಮಗಳನ್ನು ಅನುಸರಿಸುತ್ತೇವೆ’ಎಂದು ಹೇಳಿದ್ಧಾರೆ.
ಇನ್ಫೋಸಿಸ್ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುತ್ತದೆಯೇ? ಎಂದು ಷೇರುದಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೇಮಕಾತಿಗೆ ನಮ್ಮದೇ ಆದ ನಿಯಮಾವಳಿಗಳಿವೆ ಎಂದು ಉತ್ತರಿಸಿದ್ದಾರೆ.
ಜಗತ್ತಿನಾದ್ಯಂತ ಇನ್ಫೋಸಿಸ್ ಸಂಸ್ಥೆಯಲ್ಲಿ 3 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಇದರಲ್ಲಿ 39.6 ರಷ್ಟು ಮಹಿಳೆಯರಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.