ಝುಂಝುನೂ (ರಾಜಸ್ಥಾನ): ಸೈನಿಕರ ನೇಮಕಕ್ಕೆ ಜಾರಿಗೆ ತರಲಾಗಿರುವ ಅಗ್ನಿಪಥ ವ್ಯವಸ್ಥೆಯು ರಾಜಸ್ಥಾನದ ಶೆಖಾವತಿ ಪ್ರದೇಶದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಶೆಖಾವತಿ ಪ್ರದೇಶದಲ್ಲಿ ನೂರಾರು ಮಂದಿ ಯುವಕರು ನಸುಕಿನ 3.30ಕ್ಕೆ ಎದ್ದು, ಕೆಲವು ಕಿ.ಮೀ. ದೂರ ಓಡಿ ದೇಹವನ್ನು ದಂಡಿಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಸೈನ್ಯ ಸೇರುವ ಉದ್ದೇಶದಿಂದ ಈ ಅಭ್ಯಾಸ ಬೆಳೆಸಿಕೊಂಡಿರುವ ಇವರು ಅಗ್ನಿಪಥ ವ್ಯವಸ್ಥೆಯಿಂದಾಗಿ ನಿರಾಶರಾಗಿದ್ದಾರೆ.
ಸೇನೆ ಸೇರುವ ಬಯಕೆ ಇರುವವರು ಅಗ್ನಿಪಥ ಯೋಜನೆಯ ರಾಜಕೀಯ ಪರಿಣಾಮಗಳ ಬಗ್ಗೆ ತೀರಾ ಬಹಿರಂಗವಾಗಿ ಏನನ್ನೂ ಹೇಳುತ್ತಿಲ್ಲ. ಆದರೆ ಸ್ಥಳೀಯರು ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತಿರುವುದನ್ನು ಗಮನಿಸಿದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅತೃಪ್ತಿ ಇರುವುದು ಗೊತ್ತಾಗುತ್ತದೆ. ಬಿಜೆಪಿಯು ರಾಜಸ್ಥಾನದಲ್ಲಿ ಅಧಿಕಾರವನ್ನು ಕಾಂಗ್ರೆಸ್ಸಿನ ಕೈಯಿಂದ ಕಿತ್ತುಕೊಳ್ಳುವ ಬಯಕೆಯಲ್ಲಿದೆ.
ಅಗ್ನಿಪಥ ಯೋಜನೆಯ ವಿಚಾರವಾಗಿ ನಕಾರಾತ್ಮಕ ವಾತಾವರಣ ಇಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಈ ಯೋಜನೆಯ ವಿಚಾರವಾಗಿ ಎಲ್ಲವೂ ಸರಿಯಿಲ್ಲ, ಸೈನ್ಯ ಸೇರುವ ಬಯಕೆ ಹೊಂದಿರುವ ಹಲವರು, ನಿವೃತ್ತ ಯೋಧರು ಮತ್ತು ಸೇನೆಯಲ್ಲಿ ಈಗಲೂ ಸೇವೆ ಸಲ್ಲಿಸುತ್ತಿರುವ ಹಲವರು ಈ ಯೋಜನೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ.
‘ಸೇನಾ ನೇಮಕಾತಿ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಬಹಳ ಕಷ್ಟಪಟ್ಟು ಸಿದ್ಧತೆ ನಡೆಸುತ್ತೇವೆ. ಕೆಲವರು ಐದರಿಂದ ಆರು ವರ್ಷ ಸಿದ್ಧತೆ ನಡೆಸುವುದೂ ಇದೆ. ಆದರೆ ಇಷ್ಟೆಲ್ಲ ಮಾಡುವುದು ಕೇವಲ ನಾಲ್ಕು ವರ್ಷಗಳ ಸೇವಾವಧಿ ಪೂರೈಸುವುದಕ್ಕೆ ಎಂಬುದು ನ್ಯಾಯಸಮ್ಮತ ಅಲ್ಲ’ ಎಂದು ಪಿಟಿಐ ಜೊತೆ ಅನಿಸಿಕೆ ಹಂಚಿಕೊಂಡ ಹಲವರು ಹೇಳಿದ್ದಾರೆ.
‘ನಾವು ಬೆಳಿಗ್ಗೆ 4 ಗಂಟೆಯಿಂದ ಕ್ರೀಡಾಂಗಣದಲ್ಲಿ ಓಡಲು ಶುರು ಮಾಡುತ್ತೇವೆ. ನಂತರ ಒಂದೂವರೆ ಗಂಟೆ ವ್ಯಾಯಾಮ ಮಾಡುತ್ತೇವೆ. ಸರ್ಕಾರದಿಂದ ನಿರೀಕ್ಷಿಸಲು ಇನ್ನೇನು ಉಳಿದಿದೆ? ಅದು ಅಗ್ನಿಪಥ ಯೋಜನೆಯನ್ನು ಜಾರಿ ಮಾಡಿ ಆಗಿದೆ. ನಮ್ಮಲ್ಲಿ ಕೆಲವರು ನಾಲ್ಕು ವರ್ಷ ಸಿದ್ಧತೆ ನಡೆಸಿರುತ್ತಾರೆ. ಇಷ್ಟು ವರ್ಷ ಸಿದ್ಧತೆ ನಡೆಸಿದರೆ ನಾಲ್ಕು ವರ್ಷ ಮಾತ್ರ ಸೇವಾವಧಿ ಸಿಗುತ್ತದೆ’ ಎಂದು ದಿನೇಶ್ ಮೀಲ್ ಎನ್ನುವವರು ಹೇಳಿದರು.
ಚುರು, ಸಿಕರ್ ಮತ್ತು ಝುಂಝುನೂ ಜಿಲ್ಲೆಗಳನ್ನು ಒಗ್ಗೂಡಿಸಿ ಶೆಖಾವತಿ ಪ್ರದೇಶ ಎನ್ನಲಾಗುತ್ತದೆ. ಸೇನೆ ಸೇರಬೇಕು ಎಂಬ ಹಂಬಲ ಇಲ್ಲಿನ ಜನರಲ್ಲಿ ತೀವ್ರವಾಗಿರುವ ಕಾರಣಕ್ಕಾಗಿಯೇ ಈ ಪ್ರದೇಶಕ್ಕೆ ಖ್ಯಾತಿ ಬಂದಿದೆ. ಯುವಕರು ಕ್ರೀಡಾಂಗಣಗಳಲ್ಲಿ, ಹೊಲಗಳಲ್ಲಿ, ರಸ್ತೆಯ ಬದಿಯಲ್ಲಿ ನಸುಕಿನಲ್ಲಿ ಓಡುವುದು ಇಲ್ಲಿ ಸಾಮಾನ್ಯ.
‘ಸೇನಾ ನೇಮಕಾತಿಗೆ ಸಿದ್ಧತೆ ನಡೆಸುವ ಯುವಕರ ಸಂಖ್ಯೆಯು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಆಗಿದೆ. ಈ ಯೋಜನೆಯನ್ನು ಜಾರಿಗೆ ತಂದು ಸರ್ಕಾರವು ಯಾವ ಒಳಿತನ್ನೂ ಮಾಡಿಲ್ಲ. ಇದು ಮುಂಬರುವ ಚುನಾವಣೆಯಲ್ಲಿ ಪರಿಣಾಮ ಉಂಟುಮಾಡಲಿದೆ ಎಂಬುದು ನಮ್ಮ ಲೆಕ್ಕಾಚಾರ’ ಎಂದು ಸ್ಥಳೀಯರೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.