ನವದೆಹಲಿ: ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದೆ.
‘ಅಗ್ನಿಪಥ ಯೋಜನೆಯಿಂದ ದೇಶದ ಭದ್ರತೆಗೆ ತೊಡಕುಂಟಾಗಿದೆ. ಅಲ್ಲದೇ ಸಶಸ್ತ್ರಪಡೆಗಳಿಗೂ ಇದರಿಂದ ತೀವ್ರ ಅಡಚಣೆಯುಂಟಾಗಿದೆ’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಮಧ್ಯಪ್ರದೇಶಲ್ಲಿ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮಾಜಿ ಸೈನಿಕರೊಬ್ಬರೊಂದಿಗೆ ಸಂವಾದ ನಡೆಸಿದ ಬೆನ್ನಲ್ಲೇ ಜೈರಾಮ್ ಅವರು, ‘ಸಶಸ್ತ್ರ ಪಡೆಗಳಿಗೆ ಸೇರಬಯಸುವ ಯುವಜನತೆಯು ಅಗ್ನಿಪಥ ಯೋಜನೆಯಿಂದ ಅಡಚಣೆಯನ್ನು ಅನುಭವಿಸುತ್ತಿದ್ದಾರೆ’ ಎಂದಿದ್ದಾರೆ.
‘ಈ ಯೋಜನೆಯ ಮೂಲಕ ಸೇನೆಗೆ ಸೇರುವ ಸೈನಿಕರಿಗೆ ಕೇವಲ ಆರು ತಿಂಗಳ ತರಬೇತಿಯನ್ನು ನೀಡುವ ಮೂಲಕ ಸಶಸ್ತ್ರ ಪಡೆಗಳ ಸ್ಥೈರ್ಯವನ್ನು ಕುಗ್ಗಿಸಿ ದೇಶದ ಭದ್ರತೆಗೆ ಧಕ್ಕೆಯುಂಟುಮಾಡಲಾಗುತ್ತಿದೆ ಎಂದು ಮಾಜಿ ಸೈನಿಕರೊಬ್ಬರು ತಿಳಿಸಿದ್ದಾರೆ’ ಎಂದು ಜೈರಾಮ್ ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.