ನವದೆಹಲಿ:ಸೈನಿಕರ ನೇಮಕಾತಿಯ ಹೊಸ ನೀತಿ 'ಅಗ್ನಿಪಥ ಯೋಜನೆ' ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದು, ಕಿಡಿಗೇಡಿಗಳು ಬಿಹಾರದಲ್ಲಿ ಎರಡು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ.
ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ 'ಜಮ್ಮು ತವಿ ಎಕ್ಸ್‌ಪ್ರೆಸ್' ರೈಲಿಗೆ, ಹಾಜಿಪುರ್–ಬರೌನಿ ಮಾರ್ಗದ ಮೊಹಿಯುದ್ದೀನ್‌ನಗರ ನಿಲ್ದಾಣದ ಬಳಿಬೆಂಕಿ ಹಚ್ಚಲಾಗಿದೆ.
ಬಿಹಾರದಲ್ಲಿಯೇ, ಲಖಿಸರಾಯ್‌ಜಂಕ್ಷನ್‌ನಲ್ಲಿ ಮತ್ತೊಂದು ರೈಲಿಗೆ ಬೆಂಕಿ ಹಾಕಿದ್ದಾರೆ. 'ಕಿಡಿಗೇಡಿಗಳು ವಿಡಿಯೊ ಮಾಡದಂತೆ ನನ್ನನ್ನು ತಡೆದು, ಫೋನ್ ಕಸಿದುಕೊಂಡರು. ಬೆಂಕಿಯಿಂದಾಗಿ ನಾಲ್ಕರಿಂದ ಐದು ಬೋಗಿಗಳಿಗೆ ಹಾನಿಯಾಗಿದೆ' ಎಂದು ಪೊಲೀಸ್ ಸಿಬ್ಬಂದಿ ತಿಳಿಸಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.
ಬಿಹಾರದಲ್ಲಿ ಗುರುವಾರವೂ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿ, ಬಸ್‌ಗಳಿಗೆ ಕಲ್ಲು ತೂರಲಾಗಿತ್ತು.ಶಾಸಕಿ ಅರುಣಾ ದೇವಿ ಸೇರಿದಂತೆ ಹಲವರು ಕಲ್ಲು ತೂರಾಟದ ವೇಳೆ ಗಾಯಗೊಂಡಿದ್ದರು. ರೈಲುಗಳನ್ನು ತಡೆದು, ರಸ್ತೆಯಲ್ಲಿ ಟೈರ್ ಸುಡಲಾಗಿತ್ತು. ಪ್ರತಿಭಟನಕಾರರು ಬೀದಿಗಳಲ್ಲಿ ಕವಾಯತು ನಡೆಸಿ ಕೂಡ ಪ್ರತಿಭಟಿಸಿದ್ದರು.
ಬಿಹಾರ ಮಾತ್ರವಲ್ಲದೆ,ಉತ್ತರ ಪ್ರದೇಶದ,ರಾಜಸ್ಥಾನ,ಹರಿಯಾಣದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ.
ಸೇನಾ ಪಡೆಗಳಿಗೆ ಯುವ ಜನರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳುವ ‘ಅಗ್ನಿಪಥ ಯೋಜನೆ’ಯನ್ನು ಕೇಂದ್ರ ಸರ್ಕಾರವು ಮಂಗಳವಾರ ಪ್ರಕಟಿಸಿತ್ತು. ಇದಕ್ಕೆ ಪ್ರತಿಪಕ್ಷಗಳಿಂದಲೂ ವಿರೋಧ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.