ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯ ವೇಳೆ ರೈಲ್ವೆಗೆ ಸಂಬಂಧಿಸಿದ ಆಸ್ತಿ–ಪಾಸ್ತಿಗೆ ಹಾನಿಯಾಗಿ ₹259.44 ಕೋಟಿ ನಷ್ಟ ಉಂಟಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಜೂನ್ 14ರಿಂದ 30ರ ನಡುವೆ ರೈಲುಗಳ ಸಂಚಾರ ರದ್ದು ಮಾಡಿದ ಪರಿಣಾಮ ₹102.96 ಕೋಟಿ ಮರುಪಾವತಿ ಮಾಡಲಾಗಿದೆ ಎಂದೂ ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯ ಕಾರಣ ಜೂನ್ 15ರಿಂದ 23ರ ನಡುವೆ ಒಟ್ಟು 2,132 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು ಎಂದೂ ಹೇಳಿದ್ದಾರೆ.
ರಕ್ಷಣಾ ಪಡೆಗಳಲ್ಲಿ ಅಲ್ಪಾವಧಿ ಕರ್ತವ್ಯದ ನೇಮಕಾತಿ ಯೋಜನೆ ‘ಅಗ್ನಿಪಥ’ ವಿರೋಧಿಸಿ ಬಿಹಾರ ಮತ್ತು ತೆಲಂಗಾಣದಲ್ಲಿ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಕಾರರು ರೈಲುಗಳಿಗೆ ಬೆಂಕಿ ಹಚ್ಚಿದ್ದರು. ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲೂ ಪ್ರತಿಭಟನೆಗಳು ನಡೆದಿದ್ದವು.
2,359 ಕಿಸಾನ್ ರೈಲುಗಳ ಕಾರ್ಯಾಚರಣೆ:
2020ರಲ್ಲಿ ಸೇವೆ ಆರಂಭಿಸಿದಾಗಿನಿಂದ 2,359 ಕಿಸಾನ್ ರೈಲುಗಳು ಕಾರ್ಯಾಚರಿಸಿವೆ ಮತ್ತು 2020ರ ಆಗಸ್ಟ್ 7 ರಿಂದ 2022ರ ಜೂನ್ 30ರ ನಡುವೆ 7.9 ಲಕ್ಷ ಟನ್‌ಗಳಷ್ಟು ಬೇಗನೆ ಹಾಳಾಗುವ ವಸ್ತುಗಳನ್ನು ಸಾಗಿಸಲಾಗಿದೆ ಎಂದೂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.