ADVERTISEMENT

‘ಅಗ್ನಿಪಥ’: ಇಬ್ಬರು ಮಾಜಿ ಮುಖ್ಯಸ್ಥರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 1:05 IST
Last Updated 12 ಜುಲೈ 2024, 1:05 IST
-
-   

ನವದೆಹಲಿ:  ‘ಅಗ್ನಿಪಥ’ ಯೋಜನೆಯನ್ನು ಮರುಪರಿಶೀಲಿಸುವಂತೆ ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿರುವ ನಡುವೆಯೇ, ಈ ವಿವಾದಾತ್ಮಕ ಯೋಜನೆಯನ್ನು ನೌಕಾಪಡೆಯ ಇಬ್ಬರು ನಿವೃತ್ತ ಮುಖ್ಯಸ್ಥರು ಟೀಕಿಸಿದ್ದಾರೆ.

‘ಅಗ್ನಿಪಥ’ ಯೋಜನೆಯಡಿ ನೇಮಕವಾಗುವ ‘ಅಗ್ನಿವೀರ’ರಿಂದಾಗಿ ಸೇನೆಯ ಯುದ್ಧಸಾಮರ್ಥ್ಯಕ್ಕೆ ಧಕ್ಕೆಯಾಗಲಿದೆ. ಅಗತ್ಯದಷ್ಟು ತರಬೇತಿ ಹೊಂದಿರದ ಕಾರಣ ಅಗ್ನಿವೀರರು ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸಲು ಯೋಗ್ಯರಾಗಿದ್ದಾರೆ ಎಂದು ಮಾಜಿ ಮುಖ್ಯಸ್ಥರಾದ ಅಡ್ಮಿರಲ್ ಅರುಣ್‌ ಪ್ರಕಾಶ್ ಮತ್ತು ಕರಂಬೀರ್‌ ಸಿಂಗ್ ಹೇಳಿದ್ದಾರೆ.

‘ಅಗ್ನಿವೀರರಿಂದಾಗಿ ನೌಕಾಪಡೆಯ ಕಾರ್ಯಾಚರಣೆಗೆ ಹಿನ್ನಡೆಯಾಗಲಿದೆ. ನೌಕಾಪಡೆಯ ಸಾಮಾನ್ಯ ಯೋಧರು ಮತ್ತು ಅಗ್ನಿವೀರರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಯೋಧರು ಮತ್ತು ಅಗ್ನಿವೀರರ ನಡುವೆ ಸಂಘರ್ಷ ಮತ್ತು ಯುದ್ಧಸಾಮರ್ಥ್ಯ ಕುಂಠಿತವಾಗುವ ಸಾಧ್ಯತೆ ಇರುವುದರಿಂದ, ಕಮಾಂಡಿಂಗ್‌ ಅಧಿಕಾರಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಈ ಇಬ್ಬರು ಮಾಜಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಪಿಂಚಣಿಗೆ ತಗಲುವ ವೆಚ್ಚವನ್ನು ಕಡಿತಗೊಳಿಸುವ ಏಕೈಕ ಉದ್ದೇಶದಿಂದ ಅಗ್ನಿಪಥ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಇದು ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಾಮರ್ಥ್ಯವನ್ನು ಕುಂದಿಸಲಿದೆ. ರಾಷ್ಟ್ರೀಯ ಭದ್ರತೆಯ ಅರಿವು ಹೊಂದಿರುವವರಿಗೆ ಇದು ಅರ್ಥವಾಗುತ್ತದೆ’ ಎಂದು ಅಡ್ಮಿರಲ್ (ನಿವೃತ್ತ) ಕರಂಬೀರ್‌ ಸಿಂಗ್‌ ಹೇಳಿದ್ದಾರೆ.

‘ದಿ ವೈರ್’ ಸುದ್ದಿ ಪೋರ್ಟಲ್‌ನ ಕರಣ್‌ ಥಾಪರ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಈ ಯೋಜನೆ ಕುರಿತು ಮಾತನಾಡಿರುವ ಅಡ್ಮಿರಲ್‌ (ನಿವೃತ್ತ) ಪ್ರಕಾಶ್, ‘ಸೇನೆಗೆ ಅಗ್ನಿವೀರರಿಂದ ಹೆಚ್ಚು ಪ್ರಯೋಜನವಾಗಬಹುದು. ಆದರೆ, ವ್ಯಾಪಕವಾಗಿ ತಂತ್ರಜ್ಞಾನವನ್ನು ಬಳಸುವ ನೌಕಾಪಡೆ ಅಥವಾ ವಾಯುಪಡೆಗೆ ಇವರಿಂದಾಗುವ ಪ್ರಯೋಜನ ಅಲ್ಪ’ ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.