ADVERTISEMENT

5 ಅರೆಸೇನಾ ಪಡೆಗಳಲ್ಲಿ ಅಗ್ನಿವೀರರಿಗೆ ಶೇ 10 ಮೀಸಲಾತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 23:46 IST
Last Updated 11 ಜುಲೈ 2024, 23:46 IST
   

ನವದೆಹಲಿ: ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗುವ ‘ಅಗ್ನಿವೀರ’ರಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳು (ಸಿಎಪಿಎಫ್‌) ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ಶೇ 10ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಗುರುವಾರ ಘೋಷಿಸಿದೆ.

‘ಅಗ್ನಿವೀರರ ನೇಮಕಕ್ಕೆ ಅನುವು ಮಾಡಿಕೊಡುವುದಕ್ಕಾಗಿ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ನೇಮಕಾತಿ ವೇಳೆ, ವಯೋಮಿತಿ ಸಡಿಲಿಕೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆಯಿಂದ ವಿನಾಯಿತಿಯಂತಹ ಪ್ರಯೋಜನಗಳನ್ನು ಸಹ ಅಗ್ನಿವೀರರಿಗೆ ನೀಡಲಾಗುತ್ತದೆ’ ಎಂದು  ಐದು ಅರೆಸೇನಾ ಪಡೆಗಳ ಮುಖ್ಯಸ್ಥರು ಹೇಳಿದ್ದಾರೆ.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌), ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌), ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ), ರೈಲ್ವೆ ಸುರಕ್ಷಾ ಪಡೆ (ಆರ್‌ಪಿಎಫ್‌) ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮುಖ್ಯಸ್ಥರು ಈ ಕುರಿತ ಹೇಳಿಕೆಗಳನ್ನು ಒಳಗೊಂಡ ವಿಡಿಯೊ ಬಿಡುಗಡೆ ಮಾಡಿದ್ದಾರೆ.

ADVERTISEMENT

ಇಂಡೊ–ಟಿಬೆಟನ್ ಗಡಿ ಪೊಲೀಸ್‌ (ಐಟಿಬಿಪಿ)ನಲ್ಲಿ ನಡೆಯುವ ನೇಮಕಾತಿಗೂ ಇವೇ ನಿಯಮಗಳು ಅನ್ವಯವಾಗಲಿವೆ ಎಂದೂ ಅವರು ತಿಳಿಸಿದ್ದಾರೆ.

‘ನೇಮಕಾತಿ ವೇಳೆ, ಮೊದಲ ಬ್ಯಾಚ್‌ನ ಮಾಜಿ ಅಗ್ನಿವೀರರಿಗೆ ವಯೋಮಿತಿಯಲ್ಲಿ ಐದು ವರ್ಷಗಳು ಮತ್ತು ನಂತರದ ಬ್ಯಾಚ್‌ನವರಿಗೆ ಮೂರು ವರ್ಷಗಳ ಸಡಿಲಿಕೆ ನೀಡಲಾಗುವುದು’ ಎಂದು ಸಿಐಎಸ್‌ಎಫ್‌ ಮಹಾನಿರ್ದೇಶಕರಾದ ನೀನಾ ಸಿಂಗ್ ಹೇಳಿದ್ದಾರೆ.

‘ಮೊದಲ ಬ್ಯಾಚ್‌ನ ಅಗ್ನಿವೀರರನ್ನು 2026ರ ಡಿಸೆಂಬರ್ ಅಥವಾ 2027ರ ಜನವರಿಯಲ್ಲಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗುತ್ತದೆ’ ಎಂದು ಆರ್‌ಪಿಎಫ್‌ ಮಹಾ ನಿರ್ದೇಶಕ ಮನೋಜ್‌ ಯಾದವ್ ಹೇಳಿದ್ದಾರೆ.

‘ಇದೊಂದು ಸ್ವಾಗತಾರ್ಹ ನಿರ್ಧಾರ’ ಎಂದು ಸಿಆರ್‌ಪಿಎಫ್‌ ಮುಖ್ಯಸ್ಥ ಅನೀಶ್ ದಯಾಲ್‌ ಸಿಂಗ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.